ನ್ಯೂಸ್

ಗೋವಿಂದ ಕಾರಜೋಳ ಹುಟ್ಟುಹಬ್ಬದ ಬ್ಯಾನರ್​ನಲ್ಲಿ ಫೋಟೋ ಹಾಕಿಲ್ಲವೆಂದು ಯುವಕನ ಮೇಲೆ 5 ಜನರಿಂದ ಹಲ್ಲೆ

ಬಾಗಲಕೋಟೆ: ಕಳೆದ ಜನವರಿ 25ರಂದು ಸಚಿವ ಗೋವಿಂದ ಕಾರಜೋಳ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಸಿದ್ದಪಡಿಸಿದ್ದ ಬ್ಯಾನರ್​ನಲ್ಲಿ ಯುವಕನ ಫೋಟೊ ಹಾಕದ ಕಾರಣ ಐದು ಜನರು ಬ್ಯಾನರ್ ಹರಿದು ಓರ್ವನ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರವಣಕುಮಾರ ಸೊಕನಾದಗಿ(23) ಹಲ್ಲೆಗೊಳಗಾಗಿರುವ ಯುವಕ.

ಬ್ಯಾನರ್​ನಲ್ಲಿ ಅರುಣ ಜೋಗಣ್ಣವರ ಎಂಬ ಯುವಕನ ಫೋಟೊ ಹಾಕದ ಹಿನ್ನೆಲೆ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಅರುಣ ಜೋಗಣ್ಣವರ, ವಿಠ್ಠಲ ಮಳಲಿ, ಲೋಕೇಶ್ ಅಂಬಿಗೇರ, ವೆಕಪ್ಪ ಹುಲಗಣ್ಣವರ, ಸುನಿಲ್ ಕಿಲಬಣ್ಣವರ, ಮಲ್ಲಪ್ಪ ಹಾದಿಮನಿ ಎಂಬುವರು ಯುವಕ ಶ್ರವಣಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಕೇಳಿ ಬಂದಿದೆ.

ಐದು ಜನರು ಸೇರಿಕೊಂಡು ಯುವಕ ಶ್ರವಣಕುಮಾರ್​ನ ತಲೆ ಹಾಗೂ ಕೈಕಾಲುಗಳಿಗೆ ಕೋಲು, ರಾಡ್​​ನಿಂದ ಹೊಡೆದಿದ್ದಾರೆ. ಗಾಯಗೊಂಡು ಯುವಕನ ತಲೆಯಿಂದ ರಕ್ತ ಸುರಿದಿದೆ. ದಾದನಟ್ಟಿ ಗ್ರಾಮದ ಬಳಿ ಶ್ರವಣ ಅವರ ಹೊಲದಲ್ಲಿ ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಸದ್ಯ ಗಾಯಾಳು ಶ್ರವಣಕುಮಾರ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.