ನ್ಯೂಸ್

ಯೋಧನಾಗಬೇಕೆಂಬ ಆಸೆ ಹೊತ್ತಿದ್ದ ಹುಬ್ಬಳ್ಳಿಯ ಯುವಕ ಈಜಲು ಹೋಗಿ ಪ್ರಾಣವನ್ನೇ ಕಳೆದುಕೊಂಡ!

ಹುಬ್ಬಳ್ಳಿ: ಆತ ತನ್ನ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದ. ಭಾರತೀಯ ಸೇನೆಗೆ ಸೇರಿ, ದೇಶ ಸೇವೆ ಮಾಡಬೇಕೆಂದು ನಿರ್ಧರಿಸಿದ್ದ. ಅದರಂತೆ ಸೇನಾ ಪ್ರವೇಶ ಪರೀಕ್ಷೆಯನ್ನೂ ಹಾಜರಾಗಿದ್ದ. ಆದರೆ ವಿಧಿ ಲಿಖಿತ ಬೇರೆಯೇ ಇತ್ತು. ಯೋಧನಾಗುವ ಆಸೆ ಹೊತ್ತಿದ್ದ ಯುವಕ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಪವನ ನಾರಾಯಣಕರ (19) ಮೃತ ಯುವಕ.

ಕಲಘಟಗಿ ಪಟ್ಟಣದ ಬೆಂಡಿಗೇರಿ ನಿವಾಸಿಯಾದ್ದ ಪವನ, ಸ್ನೇಹಿತರೊಂದಿಗೆ ಸೇರಿಕೊಂಡು ಮಡಕಿ ಹೊನ್ನಳ್ಳಿ ಕೆರೆಗೆ ಈಜಲು ಹೋಗಿದ್ದಾನೆ. ಈ ವೇಳೆ ಅವಘಡ ಸಂಭವಿಸಿದ್ದು, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ, ಪವನ್​ಗಾಗಿ ಶೋಧಿಸಿದ್ದಾರೆ.

ಯೋಧನಾಗುವ ಆಸೆಯಲ್ಲಿ ಪವನ್, ಕೆಲವು ತಿಂಗಳ ಹಿಂದೆ ಮಿಲಿಟರಿ ಪರೀಕ್ಷೆಗೆ ಹಾಜರಾಗಿ ಬಂದಿದ್ದ. ಸದ್ಯ ಪವನ್ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿಗಳು ಕೆರೆಯಿಂದ ಮೇಲೆತ್ತಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಲಘಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.