ನ್ಯೂಸ್

ಯುವಕನೊಂದಿಗೆ ಸೆಲ್ಫಿ ತೆಗೆಸಿಕೊಂಡ ವಿವಾಹಿತ ಮಹಿಳೆ ಪಟ್ಟ ಫಜೀತಿ ಅಷ್ಟಿಷ್ಟಲ್ಲ

ಬೆಂಗಳೂರು: ಮಹಿಳಾ ಉದ್ಯೋಗಿ ಜತೆಗೆ ತೆಗೆಸಿಕೊಂಡಿದ್ದ ಸೆಲ್ಫಿ ಫೋಟೋವನ್ನೇ ಅಸ್ತ್ರವಾಗಿಸಿಕೊಂಡ ಯುವಕನೊಬ್ಬ ತನ್ನನ್ನು ಪ್ರೀತಿಸುವಂತೆ ಆಕೆಗೆ ದುಂಬಾಲು ಬಿದ್ದಿದ್ದಾನೆ. ಪ್ರೀತಿಸದಿದ್ದರೆ ಆ ಫೋಟೋಗಳನ್ನೇ ಅಶ್ಲೀಲವಾಗಿ ಮಾರ್ಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದಾಗಿ ಬ್ಲ್ಯಾಕ್​ಮೇಲ್​ ಮಾಡುತ್ತಿದ್ದು, ಯುವಕನ ಕಿರುಕುಳಕ್ಕೆ ಬೇಸತ್ತ ಮಹಿಳೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.

ಹೊಯ್ಸಳನಗರದ 27 ವರ್ಷದ ವಿವಾಹಿತ ಮಹಿಳೆಯು ಹರೀಶ್ ಎಂಬಾತನ ವಿರುದ್ಧ ರಾಮಮೂತಿರ್ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮೆಟ್ರೋ ರೈಲು ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಗೆ ಹರೀಶ್​ ಎಂಬಾತನ ಪರಿಚಯವಾಗಿತ್ತು. ಇಬ್ಬರೂ ಸೆಲ್ಫಿ ಫೋಟೋಗಳನ್ನು ತೆಗೆದುಕೊಂಡಿದ್ದರು. ಇದಾದ ಕೆಲ ದಿನಗಳ ಬಳಿಕ ಯುವಕನು ತನ್ನನ್ನುಪ್ರೀತಿಸುವಂತೆ ಮಹಿಳೆಯ ಹಿಂದೆ ಬಿದ್ದಿದ್ದಾನೆ. ತನಗೆ ಮದುವೆ ಆಗಿದೆ ಎಂದು ಹೇಳಿ ಮಹಿಳೆ ಆತನಿಂದ ದೂರವಾಗಿದ್ದಳು. ಕೊನೆಗೆ ಆತನ ಕಾಟ ತಾಳಲಾರದೆ ಕೆಲಸವನ್ನೂ ಬಿಟ್ಟಿದ್ದಳು.

ಆದರೂ ಆಕೆಗೆ ಕರೆ ಮಾಡುತ್ತಿದ್ದ ಆರೋಪಿ ಹರೀಶ್​, ತಾನು ಹೇಳಿದಂತೆ ಕೇಳಬೇಕು. ಇಲ್ಲವಾದರೆ ಸೆಲ್ಫಿ ಫೋಟೊಗಳನ್ನು ಅಶ್ಲೀಲವಾಗಿ ಮಾರ್ಪಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ಕೊಟ್ಟಿದ್ದಾರೆ. ಹರೀಶ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ರಾಮಮೂತಿರ್ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.