Korean women : ದಕ್ಷಿಣ ಕೊರಿಯಾದಿಂದ ಭಾರತಕ್ಕೆ ಆಗಮಿಸಿದ ಮಹಿಳಾ ಪ್ರವಾಸಿಗರೊಂದಿಗೆ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಭಾರಿ ಟೀಕೆಗೆ ಗುರಿಯಾಗಿದ್ದಾನೆ. ದೆಹಲಿಯಲ್ಲಿರುವ ಇಂಡಿಯಾ ಗೇಟ್ ಮುಂದೆ ಈ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಯುವಕ ಇಬ್ಬರು ಕೊರಿಯಾ ಮಹಿಳೆಯರ ಬಳಿಗೆ ಹೋಗಿ ತನ್ನನ್ನು ಅಪ್ಪಿಕೊಳ್ಳುವಂತೆ ಕೇಳಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ. ಇದು ವೈರಲ್ ಆದ ನಂತರ, ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.
ಯುವಕ ಮೊದಲು ಯುವತಿಯರನ್ನು ತನ್ನ ಮುಷ್ಟಿಗೆ ಗುದ್ದುವಂತೆ (ಫಿಸ್ಟ್ ಬಂಪ್) ಕೇಳುತ್ತಾನೆ. ಮೊದಲಿಗೆ, ಆತ ಏನು ಹೇಳುತ್ತಿದ್ದಾನೆ ಅನ್ನೋದು ಯುವತಿಗೆ ಅರ್ಥವಾಗುವುದಿಲ್ಲ. ನೀನು ನನ್ನನ್ನು ಹೊಡೆಯಬೇಕೆಂದು ಬಯಸಿದ್ದೀಯಾ? ಎಂದು ಕೇಳುತ್ತಾಳೆ. ಈ ವೇಳೆ ಪಕ್ಕದ್ದಲ್ಲಿ ಇನ್ನೊಬ್ಬ ಯುವಕ (ವಿಡಿಯೋದಲ್ಲಿ ಗೋಚರವಾಗುವುದಿಲ್ಲ) ಫಿಸ್ಟ್ ಬಂಪ್ ಎಂದು ಹೇಳಿದಾಗ, ಅದು ಅರ್ಥವಾಗಿ ಯುವತಿ, ಯುವಕನಿಗೆ ಫಿಸ್ಟ್ ಬಂಪ್ ನೀಡುತ್ತಾಳೆ.
ಆದರೆ, ಆ ಯುವಕ ಮತ್ತೆ ಯುವತಿಯರ ಬಳಿ ಮತ್ತೊಂದು ಆಸೆಯನ್ನು ವ್ಯಕ್ತಪಡಿಸುತ್ತಾನೆ. ಅವರನ್ನು ತಬ್ಬಿಕೊಳ್ಳುವಂತೆ ಕೇಳುತ್ತಾನೆ. ಇದನ್ನು ಕೇಳಿದ ಯುವತಿಯರು ಒಂದು ಕ್ಷಣ ಆಶ್ಚರ್ಯಚಕಿತರಾಗುತ್ತಾರೆ. ಫಿಸ್ಟ್ ಬಂಪ್ ಮಾಡಿದ್ದರಿಂದ ನಿನ್ನ ಕನಸು ನನಸಾಗಿದೆಯಲ್ಲ ಎಂದು ಓರ್ವ ಯುವತಿ ಹೇಳುತ್ತಾಳೆ. ಆದರೆ, ಕೊನೆಯಲ್ಲಿ, ಮತ್ತೊರ್ವ ಯುವತಿ ಆತನನ್ನು ತಬ್ಬಿಕೊಳ್ಳುತ್ತಾಳೆ. ನಂತರ ಆ ಯುವಕ "ನೀವು ಮುದ್ದಾಗಿದ್ದೀರಿ" ಮತ್ತು "ನಾನು ನಿಮ್ಮನ್ನು ಪ್ರೀತಿಸುತ್ತೇನೆ" ಎಂದು ಹೇಳುತ್ತಾನೆ. ಅದಕ್ಕೆ ಆ ಯುವತಿ ಐ ಲವ್ ಯು ಟೂ ಎಂದು ಹೇಳುತ್ತಾಳೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಯುವಕನನ್ನು ಟೀಕಿಸಿ ಹಲವು ಕಾಮೆಂಟ್‌ಗಳು ಬಂದಿವೆ. ಭಾರತೀಯರು ನಿಮ್ಮಲ್ಲಿ ಕ್ಷಮೆಯಾಚಿಸುತ್ತಾರೆ. ಇಂತಹ ಜನರಿಂದ ನೀವು ದೂರವಿರಿ ಎಂದು ಬಹುತೇಕರು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ, ಯುವಕನ ಕೃತ್ಯಗಳಿಂದ ಯುವತಿಯರು ಬೇಸರಗೊಂಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ, ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)