ಹೊಸದಿಲ್ಲಿ: ಕೇವಲ 350 ರೂಪಾಯಿಗಾಗಿ ಯುವಕನಿಗೆ ಹಲವು ಬಾರಿ ಚಾಕು ಇರಿದು, ಬರ್ಬರವಾಗಿ ಹತ್ಯೆಗೈದ ಘಟನೆ ನವದೆಹಲಿಯ ವೆಲ್ಕಮ್ ನಗರದಲ್ಲಿ ವರದಿಯಾಗಿದೆ.
18 ವರ್ಷದ ಯುವಕನ ಮೇಲೆ ದಾಳಿ ಮಾಡಿದ 16 ವರ್ಷದ ಬಾಲಕ ಆತನಿಂದ 350 ರೂ. ಕದಿಯಲು ಪ್ರಯತ್ನಿಸಿದ್ದಾನೆ. ಕೂಡಲೇ ಎಚ್ಚೆತ್ತುಕೊಂಡ ಯುವಕ ಆರೋಪಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಆರೋಪಿ ಮೊದಲು ಆತನ ಕತ್ತು ಹಿಸುಕಿ ಉಸಿರುಗಟ್ಟಿಸಿ, ತದನಂತರ ಚಾಕುವಿನಿಂದ ಹಲವು ಬಾರಿ ಇರಿದು ಕೊಂದಿದ್ದಾನೆ. ಘಟನೆಯ ಭೀಕರ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಪ್ರಕಾರ, ಈ ದುಷ್ಕೃತ್ಯ ಮಂಗಳವಾರ (ನ.21) ರಾತ್ರಿ 11.15ರ ಸುಮಾರಿಗೆ, ಈಶಾನ್ಯ ದೆಹಲಿಯ ವೆಲ್ಕಮ್ ನಗರಲ್ಲಿರುವ ಜಂತಾ ಮಜ್ದೂರ್ ಕಾಲೋನಿಯಲ್ಲಿ ಸಂಭವಿಸಿದೆ. "ಕೊಲೆಯ ಹಿಂದಿನ ಕಾರಣ ದರೋಡೆಯಾಗಿದ್ದು, ಘಟನೆಯ ನಂತರ ತನಿಖೆ ನಡೆಸಲಾಯಿತು. ತದನಂತರ ಅಪ್ರಾಪ್ತ ವಯಸ್ಕನನ್ನು ಬಂಧಿಸಿ, ಆತನಿಂದ ಅಪರಾಧಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಳ್ಳಲಾಗಿದೆ" ಎಂದು ಪೊಲೀಸ್ ಉಪ ಆಯುಕ್ತ ಜಾಯ್ ಟಿರ್ಕಿ ಹೇಳಿದರು.
ಇದನ್ನೂ ಓದಿ: ರಣ್ಬೀರ್ ಕಪೂರ್ಗೆ ಕನ್ನಡ ಹೇಳಿಕೊಟ್ಟ ರಶ್ಮಿಕಾ ಮಂದಣ್ಣ, ಮೊದಲು ನೀನು ಕನ್ನಡ ಕಲಿಯಮ್ಮ ಎಂದು ನೆಟ್ಟಿಗರ ಕಾಮೆಂಟ್..!
"ಘಟನೆ ನಡೆದ ಕೂಡಲೇ ಸಂತ್ರಸ್ತ ಯುವಕನನ್ನು ಹೆಚ್ಚಿನ ಚಿಕಿತ್ಸೆಗೆ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದ್ರೆ, ಅದಾಗಲೇ ಯುವಕ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು" ಎಂದು ಡಿಸಿಪಿ ತಿಳಿಸಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ,(ಏಜೆನ್ಸೀಸ್).