ನ್ಯೂಸ್

ಇಂಗ್ಲಿಷ್​ ಬಾರದ ನೀನು ಹೇಗೆ ಕೆಲ್ಸ ಮಾಡ್ತೀಯಾ? ಯುವಕನ ಉತ್ತರಕ್ಕೆ ಸಂದರ್ಶಕರೇ ಶಾಕ್​! ಇಂದು IPS ಅಧಿಕಾರಿ

ನವದೆಹಲಿ: ಯುಪಿಎಸ್​ಸಿ ಅಥವಾ ನಾಗರಿಕ ಸೇವಾ ಪರೀಕ್ಷೆಗಳು ಎಷ್ಟೊಂದು ಕಠಿಣ ಎಂಬುದು ಎಲ್ಲರಿಗೂ ಗೊತ್ತು. ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೂಡಲೇ ಕೆಲಸ ಸಿಗುವುದಿಲ್ಲ. ಆನಂತರದ ಸಂದರ್ಶನವು ಕೂಡ ತುಂಬಾ ಕಠಿಣವಾಗಿರುತ್ತದೆ. ಈ ಸಂದರ್ಶನವನ್ನು ಭೇದಿಸಲು ಕೇವಲ ಪುಸ್ತಕ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಸಿವಿಲ್ಸ್ ಸಂದರ್ಶನದಲ್ಲಿ ಜ್ಞಾನದ ಜತೆಗೆ ವ್ಯಕ್ತಿತ್ವ ಮತ್ತು ಸಮಯಪ್ರಜ್ಞೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಮುಖ್ಯ ಪರೀಕ್ಷೆ ಪಾಸ್​ ಮಾಡಿದ್ದ ಯುವಕನೊಬ್ಬ ಸಂದರ್ಶನಕ್ಕೆ ಹಾಜರಾಗಿದ್ದ. ಆದರೆ, ಆತನಿಂದ ಅಂದು ಇಂಗ್ಲಿಷ್ ಭಾಷೆಯೇ ಒಂದು ಸವಾಲಾಗಿತ್ತು. ಏಕೆಂದರೆ, ಇಂಗ್ಲಿಷ್​ ಬರುತ್ತಿರಲಿಲ್ಲ. ಆ ಯುವಕನಿಗೆ ಸಂದರ್ಶಕರು ಭಾರಿ ಕಠಿಣ ಪ್ರಶ್ನೆಯನ್ನೇ ಕೇಳಿದ್ದರು. ಆದರೆ, ಆ ಪ್ರಶ್ನೆಗೆ ಯುವಕ ಕೊಟ್ಟ ಉತ್ತರ ಕೇಳಿ ಸಂದರ್ಶಕರೇ ಅಚ್ಚರಿಗೀಡಾದರು. ಅಲ್ಲದೆ, ಕೆಲಸಕ್ಕೆ ಆಯ್ಕೆಯೂ ಆದರು. ಅಷ್ಟಕ್ಕೂ ಆ ಯುವಕ ಯಾರು? ಆತನಿಗೆ ಕೇಳಿದ ಪ್ರಶ್ನೆ ಏನು? ಆ ಯುವಕ ಕೊಟ್ಟ ಉತ್ತರ ಏನಿತ್ತು? ಆ ಯುವಕ ಇಂದು ಏನು ಮಾಡುತ್ತಿದ್ದಾರೆ? ಇದಿಷ್ಟೂ ಪ್ರಶ್ನೆಗಳಿಗೆ ನಾವೀಗ ಉತ್ತರವನ್ನು ಕಂಡುಕೊಳ್ಳೋಣ.

ಐಪಿಎಸ್ ಪರೀಕ್ಷೆ ಪಾಸ್​ ಮಾಡಿ ಫೈನಲ್​ ಸಂದರ್ಶನಕ್ಕೆ ಬಂದಿದ್ದ ಯುವಕನಿಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಸಂದರ್ಶನಕ್ಕೆ ಕುಳಿತಿದ್ದ ಅಧಿಕಾರಿಯೊಬ್ಬರು ನಿಮಗೆ ಇಂಗ್ಲಿಷ್ ಚೆನ್ನಾಗಿ ಬರದಿದ್ದರೆ ನೀವು ಐಪಿಎಸ್ ಆದ ನಂತರ ಹೇಗೆ ಕೆಲಸ ನಿರ್ವಹಿಸುತ್ತೀರಿ? ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಕೇಳಿ ಆ ಯುವಕ ಒಂದು ಕ್ಷಣ ಮೌನವಾದ. ಬಳಿಕ ಪ್ರಶ್ನೆ ಕೇಳಿದ ಅಧಿಕಾರಿ ಒಂದು ಲೋಟ ನೀರನ್ನು ಮುಂದಿಟ್ಟು ಈ ನೀರು ಕುಡಿದು ಉತ್ತರಿಸಿ ಎಂದರು. ಆದರೆ ಯುವಕ ಆ ನೀರನ್ನು ನಾನು ಕುಡಿಯಲಾರೆ ಸರ್ ಎನ್ನುತ್ತಾನೆ. ಸಂದರ್ಶಕನು ಏಕೆ ಕುಡಿಯುವುದಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ.

ಆಗ ಆ ಯುವಕ, ನಾನು ಸ್ಟೀಲ್ ಲೋಟದಲ್ಲಿ ಮಾತ್ರ ನೀರು ಕುಡಿಯುತ್ತೇನೆ. ಈ ಲೋಟದಲ್ಲಿ ನಾನು ಕುಡಿಯುವುದಿಲ್ಲ ಎಂದು ಉತ್ತರಿಸುತ್ತಾನೆ. ಇದರಿಂದ ಸಂದರ್ಶಕರು ಕೋಪಗೊಳ್ಳುತ್ತಾರೆ ಮತ್ತು ಗ್ಲಾಸ್‌ಗೂ ನೀರಿಗೂ ಏನು ಸಂಬಂಧ ಎಂದು ಪ್ರಶ್ನಿಸುತ್ತಾರೆ. ನಾನು ಕೂಡ ಅದನ್ನೇ ಹೇಳುತ್ತಿದ್ದೇನೆ ಸಾರ್, ನಾವು ಯಾವ ಲೋಟದಲ್ಲಿ ನೀರು ಕುಡಿಯುತ್ತೇವೆ ಎಂಬುದು ಮುಖ್ಯವಲ್ಲ. ನೀರು ಮಾತ್ರ ಮುಖ್ಯ. ಅದೇ ರೀತಿ ಎಲ್ಲವನ್ನೂ ನಿರ್ವಹಿಸಲು ನನ್ನ ಪ್ರತಿಭೆ ಮಾತ್ರ ಮುಖ್ಯವೇ ಹೊರತು ನಾನು ಮಾತನಾಡುವ ಭಾಷೆಯಲ್ಲ ಎನ್ನುತ್ತಾರೆ ಆ ಯುವಕ. ಈ ಉತ್ತರದೊಂದಿಗೆ ಯುವಕನನ್ನು ಐಪಿಎಸ್​ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ. ಆ ಯುವಕನ ಹೆಸರೇ ಮನೋಜ್​ ಕುಮಾರ್​ ಶರ್ಮಾ. ಇವರು 2005 ರಲ್ಲಿ ಮಹಾರಾಷ್ಟ್ರ ಕೇಡರ್‌ನಿಂದ ಐಪಿಎಸ್​ ಅಧಿಕಾರಿಯಾಗಿ ಆಯ್ಕೆ ಆದರು. ಪ್ರಸ್ತುತ, ಮುಂಬೈನ ಪಶ್ಚಿಮ ಪ್ರದೇಶದ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮನೋಜ್​ ಶರ್ಮಾ ಅವರ ಜೀವನ ಕತೆಯನ್ನೇ ಆಧಾರವಾಗಿ ಇಟ್ಟುಕೊಂಡು '12th Fail' ಶಿರ್ಷಿಕೆಯಡಿ ಸಿನಿಮಾವನ್ನೇ ಮಾಡಲಾಗಿದೆ. ಶಿಕ್ಷಣದಲ್ಲಿ ಹಿನ್ನಡೆ ಅನುಭವಿಸುವುದರಿಂದ ಹಿಡಿದು IPS ಅಧಿಕಾರಿಯಾಗುವ ಹಾದಿಯಲ್ಲಿ ಮನೋಜ್​ ಶರ್ಮಾ ಎದುರಿಸಿದ ಆರ್ಥಿಕ ಸಂಕಷ್ಟಗಳನ್ನು ಮತ್ತು ಅದರಿಂದ ಹೊರಬಂದು ಸಾಧನೆ ಮಾಡಿದನ್ನು ಈ ಸಿನಿಮಾದಲ್ಲಿ ಚಿತ್ರಿಸಲಾಗಿದ್ದು, ಎಷ್ಟೋ ಯುವಕರಿಗೆ ಸ್ಫೂರ್ತಿ ತುಂಬಿದೆ. (ಏಜೆನ್ಸೀಸ್​)