ಅಸ್ತಮಾ ಕಾಯಿಲೆಯಲ್ಲಿ ಸೂಕ್ಷ್ಮ ಶ್ವಾಸನಾಳಗಳಲ್ಲಿ ಹೆಚ್ಚಾದ ಲೋಳೆಯ ಸ್ರವಿಸುವಿಕೆಯ ಕಾರಣ ನಾಳಗಳು ಕಿರಿದಾಗಿ ಉಸಿರಾಟಕ್ಕೆ ಕಷ್ಟವಾಗುತ್ತದೆ. ಇದರಿಂದ ಹೃದಯ, ಶ್ವಾಸಕೋಶ, ಮಿದುಳು ಮತ್ತು ಇಡೀ ದೇಹಕ್ಕೆ ದುಷ್ಪರಿಣಾಮ ಉಂಟಾ ಗುತ್ತದೆ. ಹಾಗಾಗಿ ತಕ್ಷಣ ಸಮಸ್ಯೆ ಶಮನವಾಗಲು ಆಧುನಿಕ ವೈದ್ಯ ಪದ್ಧತಿಯಲ್ಲಿ ಹೇಳಿದ ಔಷಧಗಳನ್ನು ಅಥವಾ ಇನ್ಹೇಲರ್ ಬಳಸುವುದು ಒಳ್ಳೆಯದೇ. ಆದರೆ ಶಾಶ್ವತ ಪರಿಹಾರಕ್ಕಾಗಿ ಭಾರತೀಯ ಚಿಕಿತ್ಸಾ ಪದ್ಧತಿಗಳು ವಿವರಿಸಿರುವ ಚಿಕಿತ್ಸೆಗಳ ಮೊರೆ ಹೋಗಲೇಬೇಕು ಆಸನ, ಪ್ರಾಣಾಯಾಮ, ಜಲನೇತಿ, ಸೂತ್ರನೇತಿಯಂತಹ ಕ್ರಿಯೆಗಳನ್ನು ನಿಯಮಿತವಾಗಿ ಅಭ್ಯಾಸದಲ್ಲಿ ಇಟ್ಟುಕೊಂಡರೆ ತುಂಬಾ ಸಹಾಯವಾಗುತ್ತದೆ. ಆಯುರ್ವೆದ ಹೇಳಿದ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಬಹಳ ದೊಡ್ಡ ಪ್ರಮಾಣದಲ್ಲಿ ಅಸ್ತಮಾ ಹತೋಟಿಗೆ ಬರುತ್ತದೆ ಮತ್ತು ಆನುವಂಶಿಕವಾಗಿ ಬರುವ ಸಾಧ್ಯತೆ ಇದ್ದರೂ ಅದನ್ನು ತಡೆಗಟ್ಟುತ್ತದೆ ಅಪರೂಪಕ್ಕೆ ಮಾತ್ರ ಜೀರ್ಣಕ್ರಿಯೆಗೆ ಕಷ್ಟಕರವಾದ ಆಹಾರಗಳನ್ನು ಅಂದರೆ ಕರಿದ ಪದಾರ್ಥಗಳು ಅಥವಾ ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕೇ ಹೊರತು ಸಾಮಾನ್ಯವಾಗಿ ನಿತ್ಯವೂ ಲಘು ಭೋಜನವನ್ನೇ ಮಾಡ ಬೇಕು ಇದರಿಂದ ನಮ್ಮ ಶ್ವಾಸಕೋಶದ ಸೂಕ್ಷ್ಮನಾಳಗಳಲ್ಲಿ ವ್ಯತಿರಿಕ್ತ ಬದಲಾವಣೆ ಆಗುವುದನ್ನು ತಡೆಯಬಹುದು ಹಗಲುನಿದ್ದೆ ಮಾಡುವ ರೂಢಿಯಿದ್ದರೆ ಹಗಲು ನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತಾ ಬಂದು ಪೂರ್ತಿಯಾಗಿ ಬಿಟ್ಟು ಬಿಡಬೇಕು ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು ಮತ್ತು ಸಾಧ್ಯವಾದಷ್ಟೂ ಬೇಗ ಮಾಡಬೇಕು. ರಾತ್ರಿಯ ಊಟದಲ್ಲಿ ಹಾಲು, ಮೊಸರು, ತುಪ್ಪ, ಕರಿದ ಪದಾರ್ಥಗಳು, ಮಾಂಸಾಹಾರ ತ್ಯಜಿಸಲೇಬೇಕು. ರಾತ್ರಿ ಊಟದ ನಂತರ ಕನಿಷ್ಟ ಒಂದೂವರೆ ತಾಸು ಬಿಟ್ಟು ಮಲಗಬೇಕು.
ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಉಗಿ ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಉಗಿ ಕೊಟ್ಟರೆ ಹೆಚ್ಚು ಸಹಾಯವಾಗುತ್ತದೆ. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡು ಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಒಂದು ವೀಳ್ಯದೆಲೆಯಲ್ಲಿ ಐದು ಎಲೆ ತುಳಸಿ, ಒಂದು ಲವಂಗ, ಒಂದು ಚೂರು ಜೇಷ್ಠಮಧು ಹಾಕಿ ನಿತ್ಯ ಊಟವಾದ ನಂತರ ಒಂದು ವಾರದ ಕಾಲ ಸೇವಿಸಬಹುದು. ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಸಮ ಪ್ರಮಾಣದ ಮಿಶ್ರಣವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ; ಅಸ್ತಮಾ ಹತೋಟಿಯಲ್ಲಿರುತ್ತದೆ. ದೀರ್ಘಾವಧಿಯಿಂದ ಇರುವ ಅಸ್ತಮಾ ರೋಗಿಗಳಿಗೆ ಕೆಲವೊಮ್ಮೆ ಒಳರೋಗಿಯಾಗಿದ್ದು ಪಂಚಕರ್ಮ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗಳನ್ನು ಪಡೆದು ಗುಣಪಡಿಸಿಕೊಳ್ಳಬೇಕಾಗುತ್ತದೆ. ಅಸ್ತಮಾ ಸಂಪೂರ್ಣವಾಗಿ ಗುಣವಾದ ಮೇಲೆಯೂ ಕೆಲವು ನಿಯಮಗಳನ್ನು ಪಾಲಿಸದೇ ಹೋದರೆ ಮರುಕಳಿಸುವ ಸಾಧ್ಯತೆ ಇರುತ್ತದೆ. ಅಸ್ತಮಾ ತೀವ್ರಾವಸ್ಥೆಯಲ್ಲಿದ್ದಾಗ ಸಾಧ್ಯವಾದಷ್ಟೂ ಬೇಗ ಆಸ್ಪತ್ರೆಗೆ ಭೇಟಿ ಕೊಟ್ಟು ತುರ್ತು ಚಿಕಿತ್ಸೆ ತೆಗೆದುಕೊಳ್ಳಬೇಕು. ಉಸಿರಾಟದ ತೊಂದರೆಗಳೆಲ್ಲವೂ ಅಸ್ತಮಾ ಅಲ್ಲ. ಹಾಗಾಗಿ ವೈದ್ಯರ ಭೇಟಿ ಮಾಡದೇ ಅಸ್ತಮಾ ಎಂದು ತೀರ್ವನಿಸಿ ಮನೆಮದ್ದುಗಳನ್ನಾಗಲೀ ಔಷಧ ಸೇವನೆಯನ್ನಾಗಲೀ ಮಾಡಬಾರದು.