ನ್ಯೂಸ್

ಜ್ಞಾನವಾಪಿ ಮಸೀದಿ ಅಲ್ಲ.. ಸಿಎಂ ಯೋಗಿ ಹೇಳಿಕೆ ವೈರಲ್

ಲಖನೌ: ಕಾಶಿಯ ಜ್ಞಾನವಾಪಿ ಮಸೀದಿ ಅಲ್ಲ, ಅದನ್ನು ಮುಸ್ಲಿಮರ ಪ್ರಾರ್ಥನಾ ಸ್ಥಳ ಎಂದು ಕರೆಯುವುದೂ ತಪ್ಪು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ.

ವಾರಣಾಸಿಯ ಜ್ಞಾನವಾಪಿ ಪ್ರಾರ್ಥನಾ ಸ್ಥಳ ಎಂದು ಕರೆಯುವುದರಲ್ಲಿ ಅರ್ಥವಿಲ್ಲ. ಇದು ನಿಜವಾಗಿ ಶಿವನ ದೇವಾಲಯ. ಜ್ಞಾನವಾಪಿಯನ್ನು ಮಸೀದಿ ಎಂದು ಕರೆಯಲಾಗುತ್ತಿರುವುದರಿಂದ ಪರಮೇಶ್ವರನ ಸನ್ನಿಧಿಗೆ ಬರುವ ಭಕ್ತರಿಗೆ ಗೊಂದಲ ಉಂಟಾಗುತ್ತಿದೆ ಎಂದರು.

ಇದು ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ದೊಡ್ಡ ಅಡಚಣೆಯಾಗಿ ಪರಿಣಮಿಸಿದೆ. ಈ ಅಡೆತಡೆಯನ್ನು ಹಿಂದೆಯೇ ಅರ್ಥಮಾಡಿಕೊಂಡು ಎಚ್ಚರಿಸಿದ್ದರೆ ಭಾರತ ಎಂದಿಗೂ ವಸಾಹತುಶಾಹಿ ಆಡಳಿತಗಾರರ ಹಿಡಿತಕ್ಕೆ ಬರುತ್ತಿರಲಿಲ್ಲ ಎಂದು ಯೋಗಿ ಹೇಳಿದ್ದಾರೆ. ಇದೀಗ ಅವರ ಹೇಳಿಕೆ ಸಂಚಲನ ಮೂಡಿಸಿದೆ.

17ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಪ್ರದೇಶದಲ್ಲಿ ಶಿವನ ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಸಮುದಾಯಗಳು ಆರೋಪಿಸುತ್ತಿವೆ. ಎರಡೂ ಕಡೆಯವರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. 2024ರ ಫೆಬ್ರವರಿಯಲ್ಲಿ ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂ ಭಕ್ತರಿಗೆ ಪೂಜೆ ಮಾಡಲು ಅವಕಾಶ ನೀಡಿದೆ.