ನ್ಯೂಸ್

ಎರಡನೇ ಬಾರಿ ಸಿಎಂ ಆಗಿ ಇಂದು ಯೋಗಿ ಪ್ರಮಾಣ; ಪ್ರಧಾನಿ ಸಹಿತ ಹಲವು ಪ್ರಮುಖರು, ಗಣ್ಯರು ಭಾಗಿ

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ ಅವರು ಶುಕ್ರವಾರ ಲಖನೌನ ಇಕಾನ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಆಡಳಿತ ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳು, ವಿಪಕ್ಷ ನಾಯಕರು, ಸಂತ ಸಮಾಜದ ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

ಸುಮಾರು 75 ಸಾವಿರ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಜಿಲ್ಲೆಗಳ ಕಾರ್ಯಕರ್ತರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ನಾಯಕರು ಯೋಗಿ ಪ್ರಮಾಣಕ್ಕೆ ಸಾಕ್ಷಿಯಾಗಲಿದ್ದಾರೆ. ಸಿಎಂ ಯೋಗಿ ಜತೆಗೆ 45 ಶಾಸಕರೂ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗಿದೆ. ಕಳೆದ ಅವಧಿಯಲ್ಲಿ ಕೇಶವ ಪ್ರಸಾದ ಮೌರ್ಯ ಮತ್ತು ದಿನೇಶ ಶರ್ಮ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ನೇಮಿಸಲಾಗಿತ್ತು. ಈ ಬಾರಿ ಡಿಸಿಎಂಗಳು ಇರಲಿದ್ದಾರೋ ಅಥವಾ ಹೊಸಬರನ್ನು ಆಯ್ಕೆ ಮಾಡುತ್ತಾರೋ ಎಂಬ ವಿಷಯದಲ್ಲಿ ಈಗಲೂ ನಿಗೂಢತೆ ಕಾಯ್ದುಕೊಳ್ಳಲಾಗಿದೆ. ಕೇಶವ ಪ್ರಸಾದ ಮೌರ್ಯ ಸಿರಾತು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಆದರೆ ಅವರು ರಾಜ್ಯದ ಒಬಿಸಿ ಸಮುದಾಯದ ಪ್ರಮುಖ ನಾಯಕ ಆಗಿರುವುದರಿಂದ ಮಂತ್ರಿ ಸ್ಥಾನದಲ್ಲಿ ಮುಂದುವರಿಸುವ ಸಾಧ್ಯತೆ ಇದೆ.

ತಮಿಳುನಾಡಿನಲ್ಲಿ ಬಿಜೆಪಿ ವಿರುದ್ಧ ಮೇಲುಗೈ ಸಾಧಿಸಲು ತನ್ನ ಸಿದ್ಧಾಂತದಲ್ಲೇ ಪ್ರಮುಖ ಬದಲಾವಣೆ ಮಾಡಲು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್​ವಾದಿ) ತೀರ್ವನಿಸಿದೆ. ದೇವಾಲಯ ಮತ್ತು ಅವುಗಳ ಉತ್ಸವಗಳಲ್ಲಿ ಸಂಘ ಪರಿವಾರದ ಪ್ರಾಬಲ್ಯ ಎದುರಿಸಲು ನಾವು ಕೂಡ ಈ ಉತ್ಸವಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಯೋಜಿಸಿದ್ದೇವೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಮಧುರೈನಲ್ಲಿ ತಿಳಿಸಿದ್ದಾರೆ. ಬದಲಾಗುತ್ತಿರುವ ರಾಜಕೀಯ ವಾತಾವರಣದಲ್ಲಿ ಈ ತೀರ್ಮಾನ ಕೈಗೊಳ್ಳಬೇಕಿರುವುದು ಅನಿವಾರ್ಯವಾಗಿದೆ ಎಂದು ಪಕ್ಷ ಒಪ್ಪಿಕೊಂಡಿದೆ. ಮಾ. 30, 31 ಮತ್ತು ಏಪ್ರಿಲ್ 1ರಂದು ಮಧುರೈನಲ್ಲಿ ನಡೆಯಲಿರುವ 23ನೇ ರಾಜ್ಯ ಸಮ್ಮೇಳನದಲ್ಲಿ ನಾವು ಈ ಬಗ್ಗೆ ಚಿಂತನೆ ನಡೆಸಲಿದ್ದೇವೆ ಎಂದು ಬಾಲಕೃಷ್ಣನ್ ಹೇಳಿದ್ದಾರೆ. ನಾವು ಎಂದಿಗೂ ಧರ್ಮ-ಜಾತಿಯ ಆಧಾರದಲ್ಲಿ ಮತ ಕೇಳುವುದಿಲ್ಲ. ಜಾತ್ಯತೀತತೆ ಮತ್ತು ಧಾರ್ವಿುಕ ಸೌಹಾರ್ದತೆಯನ್ನು ಪ್ರತಿಬಿಂಬಿಸುವ ತಮಿಳುನಾಡಿನ ದೇವಾಲಯಗಳು, ಉತ್ಸವಗಳು ಈಗ ಅಪಾಯದಂಚಿನಲ್ಲಿವೆ. ಅವುಗಳನ್ನು ರಕ್ಷಿಸಲು ನಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಬಂಗಾಳ ಹಿಂಸೆ, ಟಿಎಂಸಿ ನಾಯಕ ಬಂಧನ: ಪಶ್ಚಿಮ ಬಂಗಾಳದ ಬೀರ್ಭಮ್ ಹಿಂಸಾಚಾರ ಘಟನೆಗೆ ಕಾರಣರಾದವರು ಪೊಲೀಸರ ಮುಂದೆ ಶರಣಾಗದಿದ್ದರೆ, ಪೊಲೀಸರೇ ಅವರನ್ನು ಪತ್ತೆ ಹಚ್ಚಿ ಉಗ್ರ ಶಿಕ್ಷೆಗೆ ಗುರಿಪಡಿಸಲಿದೆ ಎಂದು ಟಿಎಂಸಿ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಘಟನೆಯ ಪ್ರಮುಖ ಆರೋಪಿ, ಟಿಎಂಸಿ ಸ್ಥಳೀಯ ನಾಯಕ ಸನ್ಸೋಲ್ ಹುಸೇನ್ ಎಂಬಾತನನ್ನು ಬಂಧಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಸಿಎಂ ಮಮತಾ, ಅಲ್ಲಿಗೆ 8 ಹಿರಿಯ ಪೊಲೀಸ್ ಅಧಿಕಾರಿಗಳನ್ನೂ ಕರೆಸಿಕೊಂಡಿದ್ದರು ಮತ್ತು ದುಷ್ಕರ್ವಿುಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಬಂಧಿಸಬೇಕು ಎಂದು ಆದೇಶಿಸಿದರು. ಹಿಂಸಾಚಾರ ಘಟನೆ ವೇಳೆ ಮಹಿಳೆಯರು ಮತ್ತು ಮಕ್ಕಳು ಸೇರಿ ಒಟ್ಟು 8 ಮಂದಿಯನ್ನು ಜೀವಂತ ಸುಡಲಾಗಿತ್ತು. ಮನೆ ಸುಟ್ಟು ಹಾಕಿದ ಪರಿಣಾಮ ನಿರಾಶ್ರಿತರಾಗಿರುವ ಕುಟುಂಬಗಳ ಮನೆಗಳ ಮರು ನಿರ್ವಣಕ್ಕೆ ಸಿಎಂ ರೂ 1 ಲಕ್ಷ ನೆರವು ಪ್ರಕಟಿಸಿದರು. ಬಳಿಕ ನೆರವಿನ ಪ್ರಮಾಣವನ್ನು ರೂ 2 ಲಕ್ಷಕ್ಕೆ ಏರಿಸಲಾಗಿದೆ.