ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಸಚಿವ ವಿನಯ ಕುಲಕರ್ಣಿಗೆ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದ್ದು, ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ.
ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದಕ್ಕೆ ವಿನಯ ಕುಲಕರ್ಣಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲಿ ಆರೋಪಿ, ಮಾಜಿ ಸಚಿವ ಕುಲಕರ್ಣಿಗೆ ಜಾಮೀನು ಸಿಕ್ಕಿದೆ. ಆದರೆ ಹಿಂಡಲಗಾ ಜೈಲು ಅಧಿಕಾರಿಗಳಿಗೆ ಜಾಮೀನು ಆದೇಶ ಪ್ರತಿ ಮಾತ್ರ ಇನ್ನೂ ಬಂದಿಲ್ಲ.
ಇ-ಮೇಲ್ ಮೂಲಕ ಆದೇಶ ಪ್ರತಿ ಬಂದರೆ, ನಾಳೆ ಬೆಳಗ್ಗೆ 10 ಗಂಟೆಯ ನಂತರ ಹಿಂಡಲಗಾ ಕಾರಾಗೃಹದಿಂದ ವಿನಯ ಕುಲಕರ್ಣಿ ಬಿಡುಗಡೆ ಪ್ರಕ್ರಿಯೆ ನಡೆಯಲಿದೆ.
ಪ್ರಕರಣದ ಹಿನ್ನೆಲೆ:
2016ರ ಜೂನ್ 15ರಂದು ಧಾರವಾಡದ ಸಪ್ತಾಪುರದ ಉದಯ್ ಜಿಮ್ ಬಳಿ ಯೋಗೇಶ್ ಗೌಡರನ್ನು ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಪ್ರಕರಣದ ಗಂಭೀರತೆ ಅರಿತ ಸರ್ಕಾರ 2019ರಲ್ಲಿ ಈ ಕೇಸನ್ನು ಸಿಬಿಐಗೆ ವರ್ಗಾಯಿಸಿತ್ತು.
ಯೋಗೇಶ್ ಗೌಡ ಹತ್ಯೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಸುಮಾರು ಒಂಬತ್ತು ತಿಂಗಳಿನಿಂದ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ. ಇದೀಗ ಜನಪ್ರತಿನಿಧಿಗಳ ವಿಶೇಷ ಕೋರ್ಟ್ನಿಂದಲೂ ವಿನಯ ಕುಲಕರ್ಣಿಗೆ ಜಾಮೀನು ದೊರೆತಿದ್ದು, ಷರತ್ತುಬದ್ಧ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.