ಮುಂಬೈ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ರನ್ನು ಮಾರ್ಚ್ 11ರವರೆಗೆ ಇ.ಡಿ. ವಶಕ್ಕೆ ನೀಡಿ ಮುಂಬೈ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ.
ರಾಣಾ ಕಪೂರ್ ವಿರುದ್ಧ ಇ.ಡಿ.ಅಧಿಕಾರಿಗಳು ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾನೂನಿನ (ಪಿಎಂಎಲ್ಎ) ಅನ್ವಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಮುಂಜಾನೆ ಬಂಧಿಸಿ, ಕೋರ್ಟ್ಗೆ ಹಾಜರುಪಡಿಸಲಾಗಿತ್ತು.
ರಾಣಾ ಕಪೂರ್ ಹಾಗೂ ಅವರ ಹೆಣ್ಣುಮಕ್ಕಳ ಹೆಸರಿನಲ್ಲಿರುವ ಕಂಪನಿಯು ಹಗರಣಕ್ಕೆ ಒಳಗಾಗಿದ್ದ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಶನ್ (ಡಿಎಚ್ಎಫ್ಎಲ್)ನಿಂದ ಸಾಲವೆಂದು ಪಡೆದು ತನ್ನ 40 ಕೋಟಿ ರೂಪಾಯಿ ಆಸ್ತಿಯನ್ನು 735 ಕೋಟಿ ರೂಪಾಯಿಗೆ ಹೆಚ್ಚಿಸಿಕೊಂಡ ಬಗ್ಗೆ ದಾಖಲೆಯನ್ನು ಇಡಿ ಅಧಿಕಾರಿಗಳು ನ್ಯಾಯಾಲಯದ ಎದುರು ಇಟ್ಟಿದ್ದರು. ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ರಾಣಾ ಅವರನ್ನು ಮತ್ತೆ ಇಡಿ ವಶಕ್ಕೆ ನೀಡಿ ಕೋರ್ಟ್ ಆದೇಶಿಸಿದೆ.
ಶನಿವಾರ ಇ.ಡಿ.ಅಧಿಕಾರಿಗಳು ರಾಣಾ ಕಪೂರ್ ಅವರ ಹೆಣ್ಣುಮಕ್ಕಳಾದ ರಾಧಾ ಮತ್ತು ರೋಷಿಣಿ ಅವರ ಹೇಳಿಕೆಗಳನ್ನೂ ದಾಖಲಿಸಿಕೊಂಡಿದ್ದಾರೆ. ಹಾಗೇ ರಾಧಾ ಕಪೂರ್ ಅವರ ಪತಿ ಆದಿತ್ಯ ಖನ್ನಾರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್)