ನ್ಯೂಸ್

'ಗ್ಯಾರಂಟಿ, ಗ್ಯಾರಂಟಿ ಎಂದು ಹೇಳುವ ಕಾಂಗ್ರೆಸ್ ಅವಧಿಯಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ': ಯತ್ನಾಳ್

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್​ ಮತ್ತು ಕಮಲ ನಾಯಕ ನಡುವೆ ವಾದ-ವಿವಾದಗಳು ಭುಗಿಲೆದ್ದಿವೆ. ಈ ಮಧ್ಯೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕ್ರಿಯಿಸಿದ್ದು, ಭಯೋತ್ಪಾದಕರಿಗೆ ಕರ್ನಾಟಕ ಸುರಕ್ಷಿತ ತಾಣವಾಗಿದೆ ಎಂದರು.

"ದೇಶದ್ರೋಹಿಗಳಿಗೆ ಹಾಗೂ ಭಯೋತ್ಪಾದಕರಿಗೆ ಕರ್ನಾಟಕ ಅತ್ಯಂತ ಸುರಕ್ಷಿತ ತಾಣ ಎನ್ನಿಸಿದೆ. ಹೀಗಾಗಿ ಪಾಕಿಸ್ತಾನ ಪರ ಘೋಷಣೆ ಮೊಳಗುತ್ತಿವೆ, ಬಾಂಬ್ ಸ್ಪೋಟಗಳಾಗುತ್ತಿವೆ ಎಂದು ಹರಿಹಾಯ್ದರು. ರಾಜ್ಯ ದೇಶದ್ರೋಹಿಗಳ ಪ್ರಯೋಗ ತಾಣವಾಗಿದೆ. ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಪೋಟಗೊಳ್ಳುತ್ತಿವೆ. ವಿಧಾನಸೌಧದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಮೊಳಗುತ್ತಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಅಧಿಕಾರ ತ್ಯಜಿಸಬೇಕು" ಎಂದು ಒತ್ತಾಯಿಸಿದರು.

"ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯಾಗಿರುವುದು ಸಾಕ್ಷಿ ಸಹಿತ ಸಾಬೀತಾಗಿದೆ. ಆದರೂ, ಎಫ್‌ಎಸ್‌ಎಲ್ ವರದಿಗಾಗಿ ಕಾಯುವ ಅಗತ್ಯವಿರಲಿಲ್ಲ. ಇದೀಗ ವರದಿ ಬಂದರೂ ಬಹಿರಂಗಪಡಿಸಲು ಭಯಪಡುತ್ತಿದ್ದಾರೆ. ರಾಜ್ಯ ಸಭಾ ಸದಸ್ಯ ನಾಸಿರ್ ಹುಸೇನ್ ಮೇಲೂ ಕ್ರಮ ಕೈಗೊಳ್ಳದೇ ಕೇವಲ ಗೃಹ ಕಚೇರಿಗೆ ಕರೆದು ಮಾತನಾಡುತ್ತಾರೆ. ಇದೆಲ್ಲಾ ನೋಡಿದರೆ ಭಯೋತ್ಪಾದಕರಿಗೆ ರಾಜ್ಯ ಇಂಬು ಕೊಡುತ್ತಿದೆ" ಎಂದರು.

"ಈ ಹಿಂದೆ ಬ್ರಾಂಡ್ ಬೆಂಗಳೂರು ಮಾಡುವುದಾಗಿ ಘೋಷಣೆ ಮೊಳಗಿಸಿದಾಗಲೇ ನಾನು ಹೇಳಿದ್ದೆ, ಇವರು ಬಾಂಬ್ ಬೆಂಗಳೂರು ಮಾಡುತ್ತಾರೆ ಎಂದು. ಇದೀಗ ಅದು ನಿಜವಾಗುತ್ತಿದೆ. ಕೇವಲ ಗ್ಯಾರಂಟಿ..ಗ್ಯಾರಂಟಿ ಎಂದು ಹೇಳುವ ಕಾಂಗ್ರೆಸ್ ಅವಧಿಯಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲದಂತಾಗಿದೆ. ರಾಜ್ಯದ ಜನ ಜಾಣರಿದ್ದಾರೆ. ನಿಮ್ಮ ಗ್ಯಾರಂಟಿಗೆ ಮರುಳಾಗಿ ದೇಶ ಹಾಳು ಮಾಡಲು ತಯಾರಿಲ್ಲ" ಎಂದರು.