ವಿಜಯಪುರ: 'ಓರ್ವ ಶಾಸಕ ತಾವೊಬ್ಬರೇ ಸುಶಿಕ್ಷಿತರು ಎನ್ನುತ್ತಾ, ಹೋದಲ್ಲೆಲ್ಲ ಬಿಜೆಪಿ ನಾಯಕರ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಮಾತೆತ್ತಿದರೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೆಲಸ ಮಾಡಿದ್ದೇನೆ ಎನ್ನುತ್ತಾರೆ. ನಾನು ಹಿಂದು ಹುಲಿ, ನಾನೇ ಶ್ರೇಷ್ಠ ಎನ್ನುವವರು ಪಕ್ಷ ಬಿಟ್ಟು ಹೋದಾಗ ಮುಸ್ಲಿಂ ಟೋಪಿ ಧರಿಸಿದ್ದು ಎಲ್ಲರಿಗೂ ಗೊತ್ತಿದೆ' ಎಂದು ಹೇಳುತ್ತಾ ಮಾಜಿ ಸಚಿವ ಮುರುಗೇಶ್ ನಿರಾಣಿ, ಹೆಸರು ಉಲ್ಲೇಖಿಸದೆ ತಮ್ಮದೇ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮುರುಗೇಶ್ ನಿರಾಣಿ ಮಾತನಾಡುತ್ತಾ, 'ಅವರಿಗೆ (ಶಾಸಕ ಬಸನಗೌಡ ಪಾಟೀಲ್ ಯತ್ನಾಳ್) ವಾಜಪೇಯಿ ಸರ್ಕಾರದಲ್ಲಿ ಕೆಲಸ ಮಾಡುವ ಅವಕಾಶ ಡಾ.ವಿಜಯ ಸಂಕೇಶ್ವರ ಅವರ ತ್ಯಾಗದಿಂದ ಬಂದಿದೆ. ವಿಜಯ ಸಂಕೇಶ್ವರರು ಬಿಟ್ಟು ಕೊಟ್ಟಾಗ ಬಸವರಾಜ ಪಾಟೀಲ್ ಸೇಡಂ ಇವರಿಗೆ(ಶಾಸಕ ಬಸನಗೌಡ ಪಾಟೀಲ್ ಯತ್ನಾಳ್) ಅವಕಾಶ ಕೊಟ್ಟಿದ್ದಾರೆ' ಎಂದು ನಿರಾಣಿ ಹೇಳಿದರು.
'ನೀವು(ಯತ್ನಾಳ್) ಚುನಾವಣೆಯಲ್ಲಿ ಯಾವ ರೀತಿ ಗೆದ್ದಿದ್ದೀರಿ ಎಂಬುದು ಎಲ್ಲರಿಗೂ ಗೊತ್ತಿದೆ. ನೀವೊಬ್ಬರೇ ಗೆದ್ದಿದ್ದೀರಿ, ಆದರೆ ಉಳಿದ ಏಳು ಜನ ಯಾಕೆ ಸೋತರು? ಜಿಲ್ಲೆಯ ಏಳು ಜನರು ಸೋಲಲು ನೀವೇ ಕಾರಣ. ಪಕ್ಷದಲ್ಲೇ ಇದ್ದುಕೊಂಡು, ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್, ವಿ.ಸೋಮಣ್ಣ ಸೇರಿದಂತೆ ಅನೇಕ ನಾಯಕರ ಬಗ್ಗೆ ಮಾತಾಡಿದ್ದಾರೆ. ವಿಜಯ ಸಂಕೇಶ್ವರ ಅವರ ಬಗ್ಗೆ ಮಾತನಾಡಿ ನ್ಯಾಯಾಲಯಕ್ಕೆ ಹೋಗಿ ಕ್ಷಮಾಪಣೆ ಕೇಳಿ ಬಂದಿದ್ದಾರೆ. ಎಲ್ಲಾ ಸಮಾಜಗಳ ಬಗ್ಗೆಯೂ ಕೀಳು ಮಟ್ಟದಲ್ಲಿ ಮಾತನಾಡ್ತಾರೆ. ಮಂದಿಯಲ್ಲಿ ಒದೆಯೋದು, ಸಂದಿಯಲ್ಲಿ ಕಾಲು ಬಿಳೋದು ಮಾಡುತ್ತಾರೆ' ಎನ್ನುತ್ತಾ ಪರೋಕ್ಷವಾಗಿ ಯತ್ನಾಳ್ ವಿರುದ್ಧ ನಿರಾಣಿ ಕಿಡಿಕಾರಿದರು.
ಪಕ್ಷದ ನಾಯಕರ ಮೇಲೆಯೇ ನೂರಾರು ಬಾರಿ ಆಪಾದನೆ ಮಾಡಿ ಮಾತನಾಡಿದ್ದಾರೆ. ಬ್ಲಾಕ್ ಮೇಲ್ ಮಾಡುತ್ತಲೇ ಬಂದಿದ್ದಾರೆ. ದಳಕ್ಕೆ ಹೋದಾಗ ಎರಡು ಬಾರಿ ಸೋತಿದ್ದಾರೆ. ಬಿ.ಎಲ್. ಪಾಟೀಲ್ ಎಂಬುವವರಿಗೆ ಲೋಕಸಭೆಗೆ ಟಿಕೆಟ್ ಕೊಟ್ಟಾಗ, ಅವರನ್ನು ಸೋಲಿಸಿ ಸಿಹಿ ಹಂಚಿದ್ರು.
'ಮುರುಗೇಶ್ ನಿರಾಣಿ ನನ್ನನ್ನು(ಯತ್ನಾಳ್) ಸೋಲಿಸಲು ಹಣ ಕೊಟ್ಟಿದಾರೆ ಎಂದು ಹೇಳಿದ್ದಾರೆ. ಎಷ್ಟು ಕೊಟ್ಟಿದ್ದೇನೆ? ಯಾರಿಗೆ ಕೊಟ್ಟಿದ್ದೇನೆ ತಿಳಿಸಲಿ. 2021ರಲ್ಲಿನಾನು ಕೈಗಾರಿಕಾ ಸಚಿವನಾಗಿ, ವಿಜಯಪುರ ಉಸ್ತುವಾರಿಯಾಗಿದ್ದೆ. ಆಗ ಜಿಲ್ಲಾ ಪಂಚಾಯತಿಯಲ್ಲಿ ಮೆಜಾರಿಟಿ ಇರಲಿಲ್ಲ. ಆಗ ಎಲ್ಲರನ್ನು ಒಪ್ಪಿಸಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಮ್ಮವರನ್ನು ಆಯ್ಕೆ ಮಾಡಿದ್ದೆ. ಆದರೆ ನೀವು ಬೇರೆಯವರಿಗೆ ಅಧಿಕಾರ ಕೊಡಬಾರದು, ಎಲ್ಲಾ ನಾನೇ ಅನುಭವಿಸಬೇಕು ಎಂದು ಪಾಲಿಕೆಯಲ್ಲಿ ನಾಲ್ಕು ವರ್ಷಗಳಿಂದ ನೀವು ಮೇಯರ್, ಉಪಮೇಯರ್ ಆಗಿ ಯಾರನ್ನೂ ಮಾಡಿಲ್ಲ. 'ನಾನು ಭಾರಿ ಕರೆಕ್ಟ್ ಇದ್ದೇನೆ. ಏನೇ ಕೊಡೋದಿದ್ರೂ ಗೋ ಶಾಲೆಗೆ ಕೊಡಿ ಅಂತೀರಲ್ಲಾ? ಬಬಲೇಶ್ವರಕ್ಕೆ ಪ್ರಚಾರಕ್ಕೆ ಹೋದಾಗ ಪಕ್ಷದ ಸಾಧನೆ ಹೇಳದೆ, ತಮ್ಮ ವೈಯಕ್ತಿಕ ಮಾತನಾಡಿ ಬಂದಿದ್ದು, ನಿಮ್ಮ ಮನಸ್ಸಿನಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಿದೆ' ಎಂದು ನಿರಾಟಿ ಟೀಕಿಸಿದರು.
'ನಾನೇ ಒಬ್ಬ ಗೆಲ್ಲಬೇಕು, ನಾನೇ ಶ್ರೇಷ್ಠ ಎಂಬುದನ್ನು ಅವರು ಮೊದಲು ಬಿಡಬೇಕು. ಜಿಲ್ಲಾ ಪಂಚಾಯತಿ, ಲೋಕಸಭೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಎಲ್ಲರ ಜತೆ ಕೈಗೂಡಿಸಬೇಕು. ಇವರ ಬಗ್ಗೆ ರಾಷ್ಟ್ರ ಹಾಗೂ ರಾಜ್ಯ ನಾಯಕರ ಗಮನಕ್ಕೆ ತರೋದರಲ್ಲಿ ನಾವು ವಿಫಲರಾಗಿದ್ದೇವೆ. ಮಾಡಿದ ತಪ್ಪನ್ನು ಒಪ್ಪಿಕೊಂಡು ಸುಧಾರಿಸುತ್ತಾರೆ ಅಂದುಕೊಂಡೆವು. ಅವರಿಂದ ನಮಗಷ್ಟೇ ಅಲ್ಲ, ಕಾರ್ಯಕರ್ತರಿಗೂ ಹಾನಿ ಆಗುತ್ತಿದೆ. ಬರುವ ಚುನಾವಣೆಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿ, ನಮ್ಮಅಭ್ಯರ್ಥಿಗಳನ್ನು ಗೆಲ್ಲಿಸೋಣ. ಅವರು ನಡತೆ ಸರಿ ಮಾಡಿಕೊಳ್ಳಬೇಕು, ಅವರ ಬಾಯಿಂದ ಬರುವ ಶಬ್ದಗಳು ಬಂದ್ ಮಾಡಬೇಕು. ನಾವೇನು ಅಮೇರಿಕಾದಿಂದ ಬಂದಿಲ್ಲ, ನಾವು ಇಲ್ಲಿಯವರೇ, ನಮ್ಮ ಸಂಬಂಧಿಕರು ವಿಜಯಪುದವರೇ ಇದ್ದಾರೆ. ನಮಗೂ ಮಾತನಾಡಲು ಬರುತ್ತೆ, ಅಂತಹ ಶಬ್ದಗಳು ನಮ್ಮ ಬಾಯಲ್ಲಿ ಬರೋದಿಲ್ಲ' ಎನ್ನುತ್ತಾ ಮುರುಗೇಶ್ ನಿರಾಣಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಗರಂ ಆದರು.