ನ್ಯೂಸ್

ಯಶಸ್ವಿನಿ ನೋಂದಣಿ, ಮೈಸೂರು ಮುಂಚೂಣಿ..

| ಆರ್.ತುಳಸಿಕುಮಾರ್ ಬೆಂಗಳೂರು

ರಾಜ್ಯದಲ್ಲಿ ಸಹಕಾರಿಗಳಿಗೆ ನಗದುರಹಿತ ಆರೋಗ್ಯ ಚಿಕಿತ್ಸಾ ಸೌಲಭ್ಯ ಒದಗಿಸುವ ಯಶಸ್ವಿನಿ ಯೋಜನೆಯಡಿ ಮಂಡ್ಯ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಸದಸ್ಯರು ನೋಂದಣಿ ಆಗಿದ್ದು, ರಾಜಧಾನಿಯನ್ನೂ ಹಿಂದಿಕ್ಕಿದೆ.

ಮರುಜಾರಿಗೊಳಿಸಲಾದ ಯಶಸ್ವಿನಿ ಯೋಜನೆಗೆ ಕಳೆದ ನವೆಂಬರ್​ನಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಕೆಲವೊಂದು ಜಿಲ್ಲೆಗಳನ್ನು ಹೊರತುಪಡಿಸಿ ಇನ್ನುಳಿದೆಡೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಈವರೆಗೆ 30 ಲಕ್ಷ ಗುರಿಗೆ ಎದುರಾಗಿ 34.81 ಲಕ್ಷ ನೋಂದಣಿ ಆಗಿದ್ದು, ತಿಂಗಳಾಂತ್ಯಕ್ಕೆ ಒಟ್ಟಾರೆ 40 ಲಕ್ಷ ಸದಸ್ಯರು ಫಲಾನುಭವಿಗಳಾಗುವ ನಿರೀಕ್ಷೆ ಯಶಸ್ವಿನಿ ಟ್ರಸ್ಟ್ ಹೊಂದಿದೆ.

ರಾಜ್ಯದೆಲ್ಲೆಡೆ ಸಹಕಾರ ಕ್ಷೇತ್ರ ಸಶಕ್ತವಾಗಿದ್ದು, ರೈತರು ಸೇರಿ ವಿವಿಧ ಕ್ಷೇತ್ರದವರು ಸಹಕಾರ ತತ್ವದಡಿ ಸಂಘಗಳನ್ನು ರಚಿಸಿಕೊಂಡಿದ್ದಾರೆ. ಯಶಸ್ವಿನಿ ಯೋಜನೆಗೆ ಸೇರ್ಪಡೆಯಾಗಲು ಖಾಸಗಿ ನೌಕರರಿಗೂ ಅವಕಾಶ ಮಾಡಿಕೊಟ್ಟಿರುವುದರಿಂದ ನಗರ ಪ್ರದೇಶಗಳಲ್ಲಿರುವ ಸಹಕಾರಿಗಳು ಯೋಜನೆಯತ್ತ ಒಲವು ತೋರಿದ್ದಾರೆ. ಸಹಕಾರ ಸಂಘಗಳು ಸಕ್ರಿಯವಾಗಿರುವ ಮಂಡ್ಯ ಜಿಲ್ಲೆಯಲ್ಲಿ 1.50 ಲಕ್ಷ ಸದಸ್ಯತ್ವದ ಗುರಿಗೆ ಎದುರಾಗಿ 3.20 ಲಕ್ಷ ನೋಂದಣಿ ಆಗಿದೆ. ಉಡುಪಿ ಜಿಲ್ಲೆಯಲ್ಲಿ 75 ಸಾವಿರಕ್ಕೆ ಎದುರಾಗಿ 3.01 ಲಕ್ಷ ಸದಸ್ಯತ್ವದ ನೋಂದಣಿಯಾಗಿದೆ. ಮೈಸೂರು, ತುಮಕೂರು, ಶಿವಮೊಗ್ಗ, ದಕ್ಷಿಣಕನ್ನಡ, ಉತ್ತರಕನ್ನಡ, ಬಾಗಲಕೋಟೆ, ಬೀದರ್ ಸಹಿತ 22 ಜಿಲ್ಲೆಗಳು ನೋಂದಣಿ ಗುರಿ ದಾಟಿವೆ.

ಹಿಂದೆ ಬಿದ್ದ ರಾಜಧಾನಿ: ರಾಜ್ಯದಲ್ಲಿ ಅತಿ ಹೆಚ್ಚಿನ ಗೃಹ ನಿರ್ಮಾಣ ಸಂಘಗಳು ಬೆಂಗಳೂರಿನಲ್ಲಿವೆ. ಜತೆಗೆ ಸೌಹಾರ್ದ, ವಿವಿಧ ಪತ್ತಿನ ಸಹಕಾರ ಸಂಘಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಇದನ್ನಾಧರಿಸಿ ಬೆಂಗಳೂರಿನ ನಾಲ್ಕು ವಲಯಗಳಲ್ಲಿ ಒಟ್ಟು 3.25 ಲಕ್ಷ ನೋಂದಣಿ ಗುರಿ ನೀಡಲಾಗಿತ್ತು. ಆದರೆ, 1.63 ಲಕ್ಷ ಸದಸ್ಯರು ಮಾತ್ರ ಯೋಜನಾ ವ್ಯಾಪ್ತಿಗೆ ಸೇರಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಅತಿ ಕಡಿಮೆ ನೋಂದಣಿ (29,625) ದಾಖಲಾಗಿದೆ. ರಾಜ್ಯದ ಕಂದಾಯ ವಿಭಾಗವಾರು ಪೈಕಿ ಮೈಸೂರು ಹಾಗೂ ಬೆಳಗಾವಿಯಲ್ಲಿ ಹೆಚ್ಚಿನ ಸಾಧನೆ ಮಾಡಲಾಗಿದೆ.

ರೈತರು ಸೇರಿ ಬಡ ಕುಟುಂಬಗಳಿಗೆ ಯಶಸ್ವಿನಿ ಯೋಜನೆ ಸಹಕಾರಿಯಾಗಿದೆ. ನಮ್ಮ ಸಂಘದಲ್ಲಿ 3 ಸಾವಿರಕ್ಕಿಂತಲೂ ಹೆಚ್ಚಿನ ಸದಸ್ಯರು ಯಶಸ್ವಿನಿಯಡಿ ನೋಂದಣಿಯಾಗಿದ್ದಾರೆ. ಫಲಾನುಭವಿಗಳಿಗೆ ಚಿಕಿತ್ಸೆ ದೊರೆಯಲು ಟ್ರಸ್ಟ್ ಬೇಗನೆ ಐಡಿ ಕಾರ್ಡ್ ವಿತರಿಸಲಿ. | ಮೋಹನ್​ರಾಜ್ ಅಧ್ಯಕ್ಷ, ಬ್ಯಾಟರಾಯನಪುರ ಕೃಷಿ ಪತ್ತಿನ ಸಹಕಾರ ಸಂಘ

ನೋಂದಣಿ ಅವಧಿ ವಿಸ್ತರಣೆ ಇಲ್ಲ: ಯಶಸ್ವಿನಿ ಯೋಜನೆಗೆ ಸದಸ್ಯರಾಗಿ ನೋಂದಣಿಗೆ ಈಗಾಗಲೆ ಎರಡು ಬಾರಿ ಅವಧಿ ವಿಸ್ತರಿಸಿದ್ದು, ಮತ್ತೆ ಗಡುವು ವಿಸ್ತರಿಸುವ ಸಾಧ್ಯತೆ ಇಲ್ಲ. ಆರ್ಥಿಕ ವರ್ಷ ಕೊನೆಗೊಳ್ಳುತ್ತಿರುವ ಕಾರಣ ಲೆಕ್ಕಪತ್ರ ತಪಾಸಣೆ, ಆಡಿಟ್ ವರದಿ ಸಲ್ಲಿಕೆಗೆ ಅಡ್ಡಿಯಾಗುವ ಕಾರಣ 3ನೇ ಬಾರಿ ಗಡುವು ವಿಸ್ತರಣೆಯಾಗದು. ಮುಖ್ಯವಾಗಿ ಈಗಾಗಲೆ ನೋಂದಣಿ ಆಗಿರುವವರಿಗೆ ಯೂನಿಕ್ ಐಡಿ ಕಾರ್ಡ್​ಗಳ ವಿತರಣೆ ಹಾಗೂ ಲಿಂಕ್ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸೇವೆ ಒದಗಿಸಬೇಕಿರುವ ಕಾರಣ ಮುಂದಿನ ಆರ್ಥಿಕ ಸಾಲಿನಲ್ಲಿ ಹೊಸ ನೋಂದಣಿಗೆ ಅವಕಾಶ ಮಾಡಿಕೊಡಲು ಯಶಸ್ವಿನಿ ಟ್ರಸ್ಟ್ ಆಲೋಚನೆ ನಡೆಸಿದೆ.

ಪ್ರಯೋಜನಗಳೇನು?
  • ಯೋಜನೆಯಡಿ ನೋಂದಣಿಯಾದ ಸದಸ್ಯರ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ. ಮೊತ್ತದ ನಗದುರಹಿತ ಚಿಕಿತ್ಸೆ.
  • ಒಟ್ಟು 1,650 ಬಗೆಯ ಕಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯ.
  • ರಾಜ್ಯದೆಲ್ಲೆಡೆ 500ಕ್ಕೂ ಹೆಚ್ಚು ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯ.
  • ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿ ಚಿಕಿತ್ಸೆಗೆ ಗರಿಷ್ಠ 200 ರೂ. (3 ತಿಂಗಳ ಅವಧಿಗೆ) ಮಿತಿ.
  • ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಕಿವಿ, ಮೂಗು, ಗಂಟಲು ವ್ಯಾಧಿ, ಕರುಳಿನ ಕಾಯಿಲೆ, ನರಕ್ಕೆ ಸಂಬಂಧಿಸಿದ ಕಾಯಿಲೆ, ಕಣ್ಣಿನ ಕಾಯಿಲೆ, ಮೂಳೆರೋಗ, ಸ್ತ್ರೀಯರಿಗೆ ಸಂಬಂಧಿಸಿದ ಕಾಯಿಲೆ ಹಾಗೂ ಸಾಮಾನ್ಯ ರೋಗಿಗಳಿಗೆ ಸಂಬಂಧಿಸಿದ ಚಿಕಿತ್ಸಾ ಸೌಲಭ್ಯ.
  • ನವಜಾತ ಶಿಶುವಿನ ತಾಯಿ ಹೆಸರು ಯಶಸ್ವಿನಿ ಕಾರ್ಡ್​ನಲ್ಲಿದ್ದರೆ 30 ದಿನಗಳವರೆಗೆ ಶಿಶುವಿಗೆ ಚಿಕಿತ್ಸಾ ಸೌಲಭ್ಯಕ್ಕೆ ಅವಕಾಶ.
  • ನೆಟ್​ವರ್ಕ್ ಆಸ್ಪತ್ರೆಗಳಲ್ಲಿ ಒದಗಿ ಸಿರುವ ಚಿಕಿತ್ಸಾ ಸೌಲಭ್ಯದಲ್ಲಿ ಔಷಧಿ ವೆಚ್ಚ, ಆಸ್ಪತ್ರೆ ವೆಚ್ಚ, ಶಸ್ತ್ರಚಿಕಿತ್ಸೆ ವೆಚ್ಚ, ಆಪರೇಷನ್ ಥಿಯೇಟರ್ ಬಾಡಿಗೆ, ಅರಿವಳಿಕೆ ತಜ್ಞರ ವೆಚ್ಚ, ಸರ್ಜನ್ ಫೀ, ನರ್ಸ್ ಫೀ, ಕನ್ಸಲ್​ಟೆಂಟ್ ಫೀ, ಬೆಡ್​ಚಾರ್ಜ್ ಇತ್ಯಾದಿ ವೆಚ್ಚ.