ನ್ಯೂಸ್

ಯಶ್​ ನಟನೆಯ Toxic ಚಿತ್ರದ Exclusive ಫೋಟೋಗಳು ಲೀಕ್!

ಬೆಂಗಳೂರು: ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಕ್ರೇಜ್ ಗಿಟ್ಟಿಸಿಕೊಂಡಿರುವ ನಟ ಯಶ್​ ಸದ್ಯ ಟಾಕ್ಸಿಕ್​ ಸಿನಿಮಾದಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಭರದಿಂದ ಸಾಗಿದೆ. ಗೀತು ಮೋಹನ್ ದಾಸ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಈ ಸಿನಿಮಾಗೆ ಜಂಟಿಯಾಗಿ ಬಂಡವಾಳ ಹೂಡುತ್ತಿದೆ.

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಯಶ್ ಅವರು ಮುಂದಿನ ಸಿನಿಮಾ ಘೋಷಣೆ ಮಾಡೋಕೆ ಒಂದು ವರ್ಷಕ್ಕೂ ಅಧಿಕ ಕಾಲ ಸಮಯ ತೆಗೆದುಕೊಂಡರು. ಇದೀಗ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್​ ಜೊತೆ ಮುಂದಿನ ಚಿತ್ರಕ್ಕಾಗಿ ಯಶ್​ ಕೈ ಜೋಡಿಸಿದ್ದು, ಇತ್ತೀಚೆಗೆ ಸಿನಿಮಾದ ಕೆಲವು ಫೋಟೋ ವೈರಲ್ ಆಗಿತ್ತು.

ಪೀಣ್ಯ ಬಳಿ ಇರುವ ಎಚ್​ಎಂಟಿ ಫ್ಯಾಕ್ಟರಿಯಲ್ಲಿ ಚಿತ್ರತಂಡ ಬೃಹತ್​ ಸೆಟ್​ ನಿರ್ಮಿಸಿದೆ. ಇದಕ್ಕಾಗಿ ನೂರಾರು ಮರಗಳ ಮಾರಣಹೋಮ ನಡೆದಿದ್ದು, ಈ ಸಂಬಂಧ ಅರಣ್ಯ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವೇಳೆ ತೆಗೆಯಲಾದ ಸೆಟ್​ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಚಿತ್ರವು ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ಮೂಡಿ ಬರಲಿದೆ ಎಂದು ಹೇಳಲಾಗಿದೆ.

ಇನ್ನೂ ಎಚ್​ಎಂಟಿ ಸಂಸ್ಥೆ ಆವರಣದಲ್ಲಿ ಸೆಟ್​ ನಿರ್ಮಾಣ ಮಾಡಿದ ಸಂಬಂಧ ಈ ಹಿಂದೆ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಸುಮಾರು 20 ಎಕರೆ ಜಾಗದಲ್ಲಿ ಸೆಟ್​ ನಿರ್ಮಿಸಲಾಗಿದ್ದು, ಇದಕ್ಕಾಗಿ ಅಕ್ರಮವಾಗಿ ಮರಗಳನ್ನು ಕಡೆಯಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಇದೀಗ ಖುದ್ದು ಅರಣ್ಯ ಸವಿವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರತಂಡದ ವಿರುದ್ಧ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.