ನ್ಯೂಸ್

ಲಡಾಕ್​ ಮುಖಭಂಗಕ್ಕೆ ಭಯಾನಕ ಸೇಡು ತೀರಿಸಬಹುದು ಕ್ಸಿ ಜಿನ್​ಪಿಂಗ್​ ಎನ್ನುತ್ತಿವೆ ವರದಿಗಳು

ವಾಷಿಂಗ್ಟನ್​: ಲಡಾಕ್​ನಲ್ಲಿ ಸೇನಾ ಅತಿಕ್ರಮಣ ನಡೆಸಲು ಪ್ರಯತ್ನಿಸಿ ಹೀನಾಯ ಮುಖಭಂಗ ಅನುಭವಿಸಿದ ಚೀನಾ, ಮತ್ತೊಂದು ರೀತಿಯಲ್ಲಿ ಭಯಾನಕ ಸೇಡು ತೀರಿಸಿಕೊಳ್ಳಲು ಮುಂದಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಮುಂಚೂಣಿ ನಿಯತಕಾಲಿಕೆ ನ್ಯೂಸ್​ವೀಕ್​ ಸಂಪಾದಕೀಯ ಲೇಖನ ಉಲ್ಲೇಖಿಸಿದೆ. ಚೀನಾ ಕಮ್ಯೂನಿಸ್ಟ್ ಪಾರ್ಟಿಯ ಮುಖ್ಯಸ್ಥ, ಪೀಪಲ್ಸ್ ಲಿಬರೇಷನ್​ ಆರ್ಮಿಯ ಮುಖ್ಯಸ್ಥರೂ ಆಗಿರುವ ಕ್ಸಿ ಜಿನ್​ಪಿಂಗ್​ ಮತ್ತೊಮ್ಮೆ ತೀವ್ರತರವಾದ ಅತಿಕ್ರಮಣಕ್ಕೆ ಮುಂದಾಗಲು ಆದೇಶ ನೀಡುವ ಸಾಧ್ಯತೆ ಇದೆ ಎಂದು ಅದು ಪ್ರತಿಪಾದಿಸಿದೆ.

ಭಾರತದ ವಿರುದ್ಧದ ಪ್ರತಿಯೊಂದು ಅತಿಕ್ರಮಣದ ನಡೆಯ ಹಿಂದೆಯೂ ಚೀನಾ ಅಧ್ಯಕ್ಷ ಕ್ಸಿ ಜಿನ್​ ಪಿಂಗ್ ನೇರ ಕೈವಾಡ ಇದೆ. ಗಡಿಭಾಗದಲ್ಲಿ ಚೀನಾ ಸೇನೆಯ ಸೋಲು ಅನೇಕ ತೊಂದರೆಗಳಿಗೆ ಕಾರಣವಾಗಲಿದೆ. ದುರದೃಷ್ಟವಶಾತ್​ ಈ ಸೋಲುಗಳು ಚೀನಾದ ಮುಖ್ಯಸ್ಥನನ್ನು ಮತ್ತಷ್ಟು ಆಕ್ರಮಣಶೀಲರಾಗುವಂತೆ ಮಾಡಲು ಪ್ರಚೋದಿಸುತ್ತದೆ. ಹೀಗಾಗಿ ಮತ್ತೊಮ್ಮೆ ಚೀನಾದ ಅತಿಕ್ರಮಣವನ್ನು ಭಾರತ ನಿರೀಕ್ಷಿಸಬಹುದು ಎಂದು ಅದು ಎಚ್ಚರಿಸಿದೆ.

ಗಡಿಭಾಗದಲ್ಲಿ ಭಾರತೀಯ ಸೇನಾ ಪಡೆ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತಿಕ್ರಮಣವನ್ನು ಎಳ್ಳಷ್ಟೂ ಸಹಿಸದೇ ಪ್ರತಿದಾಳಿ ನಡೆಸುತ್ತಿದ್ದು, ಅದನ್ನು ಎದುರಿಸುವುದು ಅತಿಕ್ರಮಣಕಾರರಿಗೆ ಕಷ್ಟವಾಗಿದೆ ಎಂಬುದು ವೇದ್ಯ ವಿಚಾರ. ಈ ರೀತಿ ದಿಟ್ಟತನ ತೋರುವ ಮೂಲಕ ಭಾರತ ಹೊಸದೊಂದು ಅಧ್ಯಾಯವನ್ನು ಬರೆಯತೊಡಗಿದೆ ಎಂದು ಸಂಪಾದಕೀಯ ಪ್ರಶಂಸೆ ವ್ಯಕ್ತಪಡಿಸಿದೆ. (ಏಜೆನ್ಸೀಸ್)