ಬೆಂಗಳೂರು: ಹಾಲಿವುಡ್ನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಬಾರ್ಬಿ ಚಲನಚಿತ್ರವನ್ನು ವೀಕ್ಷಿಸಿದ ಸಾಕಷ್ಟು ಮಂದಿ ಬಾರ್ಬಿ ಬೊಂಬೆಯಂತೆಯೇ ಡ್ರೆಸ್ ಮಾಡಿಕೊಳ್ಳುವುದು ಟ್ರೆಂಡ್ ಆಗಿದೆ. ಅಷ್ಟೇ ಅಲ್ಲ, ಬಾರ್ಬಿಯಂತೆ ಮಹಿಳೆಯರು ಡ್ರೆಸ್ ಮಾಡಿಕೊಂಡು ಸಾಕಷ್ಟು ರೀಲ್ಸ್ಗಳನ್ನ ಕೂಡ ಮಾಡುತ್ತಿದ್ದಾರೆ. ಆದರೆ ನಾವೀಗ ಹೇಳಲು ಹೊರಟಿರುವುದು ವಿಶ್ವದ ಮೊದಲ ಬಾರ್ಬಿ ಡಾಕ್ಟರ್ ಬಗ್ಗೆ. ಹೌದು. ಜರ್ಮನಿಯ ಮಹಿಳೆಯೊಬ್ಬರು ಬಾರ್ಬಿ ಡಾಕ್ಟರ್ ಎಂದು ಫೇಮಸ್ ಆಗಿದ್ದಾರೆ. ಬಾರ್ಬಿ ಬೊಂಬೆಗಳ ಬಹುದೊಡ್ಡ ಫ್ಯಾನ್ ಆಗಿರುವ ಜರ್ಮನಿಯ ಬೆಟ್ಟಿನಾ ಡಾರ್ಫ್‌ಮನ್ ಈವರೆಗೂ 18,500 ಬಾರ್ಬಿ ಬೊಂಬೆಗಳನ್ನ ಹೊಂದಿದ್ದು, ದಾಖಲೆ ಬರೆದಿದ್ದಾರೆ. ಅಪರೂಪದ ಬಾರ್ಬಿ ಬೊಂಬೆಗಳನ್ನ ಹೊಂದಿರುವ ಆಕೆಯ ಬಳಿ 1959 ರ ಕಾಲದ ಬೊಂಬೆಗಳೂ ಇವೆಯಂತೆ.
ಬಾರ್ಬಿ ಬೊಂಬೆಯ ಆಸ್ಪತ್ರೆ
ಗಮನಾರ್ಹ ಸಂಗತಿ ಅಂದರೆ ಈಕೆ ಪ್ರಪಂಚದಲ್ಲೇ ಅತೀ ಹೆಚ್ಚು ಬಾರ್ಬಿ ಬೊಂಬೆಗಳನ್ನ ಹೊಂದಿರುವ ಮಹಿಳೆ ಎಂದು ಗುರುತಿಸಿಕೊಂಡಿದ್ದು, ಸ್ವಯಂ ಘೋಷಿತ ಬಾರ್ಬಿ ಡಾಕ್ಟರ್ ಆಗಿದ್ದಾರೆ. ಬಾರ್ಬಿಯ ಬೊಂಬೆಯ ಕ್ಲಿಪ್, ರಬ್ಬರ್ ಬ್ಯಾಂಡ್, ಕೈ-ಕಾಲು, ಮುಖದ ಭಾಗ ಹೀಗೆ ಯಾವುದೇ ಪಾರ್ಟ್ ಹಾಳಾಗಿದ್ದರೂ ಕೂಡ ಅದನ್ನ ಫಿಕ್ಸ್ ಮಾಡಿ ಕೊಡುತ್ತಾರೆ. ಎಲ್ಲಾ ಗೊಂಬೆಗಳಿಗೆ ಸರಿ ಹೊಂದುವಂತಹ ಕೈ-ಕಾಲು ಮತ್ತು ಇನ್ನಿತರೆ ಬಿಡಿ ಭಾಗಗಳ ಕಲೆಕ್ಷನ್ ಇವರ ಬಳಿ ಇದೆ. ಬಾರ್ಬಿ ಬೊಂಬೆಗಳ ರಿಪೇರಿ ಮಾಡಬೇಕು ಅಂದ್ರೆ ಜರ್ಮನಿಯ ಸಾಕಷ್ಟು ಅಂಗಡಿ ಮಾಲೀಕರು ಈಕೆಯನ್ನ ಸಂಪರ್ಕಿಸುತ್ತಾರೆ. ಇಲ್ಲಿ ಇತರೆ ಬಾರ್ಬಿ ಬೊಂಬೆ ಸಂಗ್ರಹಕರಿಗೂ ಹಾಳಾದ ಬೊಂಬೆಯನ್ನು ಸರಿಪಡಿಸಿಕೊಡುತ್ತಾರೆ ಬೆಟ್ಟಿನಾ.
ಬೆಟ್ಟಿನಾ ಸುಮಾರು 30 ವರ್ಷಗಳಿಂದ ಬಾರ್ಬಿಗಳನ್ನು ಸಂಗ್ರಹಿಸುತ್ತಿದ್ದು, 1,125 ಬಾರ್ಬಿ ಬೊಂಬೆಗಳನ್ನು ಹೊಂದಿರುವ ಬ್ರಿಟನ್ನ ಟೋನಿ ಮಟ್ಟಿಯಾ ಅವರನ್ನು ಹಿಂದಿಕ್ಕಿದ್ದಾರೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂದರ್ಶನದಲ್ಲಿ ಮಾತನಾಡಿದ ಈಕೆ ನಾನು ಬಾರ್ಬಿ ಬೊಂಬೆಗಳನ್ನು ಪ್ರೀತಿಸುತ್ತೇನೆ. ಏಕೆಂದರೆ ನನ್ನ ಬಾಲ್ಯದಲ್ಲಿ ಹೆಚ್ಚು ಸಮಯವನ್ನ ಬಾರ್ಬಿ ಬೊಂಬೆಗಳೊಂದಿಗೇ ಕಳೆದಿದ್ದೇನೆ. ಅದು ಖುಷಿಯ ಕ್ಷಣಗಳಾಗಿತ್ತು ಎಂದು ಹೇಳಿಕೊಂಡಿದ್ದಾರೆ.