ನ್ಯೂಸ್

ವಿಶ್ವ ಜನಸಂಖ್ಯೆ ಇಳಿಕೆ ಸಾಧ್ಯತೆ; ಚೀನಾ ಹಿಮ್ಮೆಟ್ಟಿಸಲಿದೆ ಭಾರತ..!

rameshmysuru

ವಾಷಿಂಗ್ಟನ್: 2100ರ ವೇಳೆಗೆ ಜಗತ್ತಿನ ಜನಸಂಖ್ಯೆಯು ವಿಶ್ವಸಂಸ್ಥೆ ಅಂದಾಜು ಮಾಡಿದ್ದಕ್ಕಿಂತ ಕಡಿಮೆ ಆಗಲಿದೆ ಎಂದು ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನ ತಿಳಿಸಿದೆ. ಜನಸಂಖ್ಯೆ ಪ್ರಮಾಣ ಈ ಶತಮಾನದ ಅಂತ್ಯದ ಹೊತ್ತಿಗೆ 200 ಕೋಟಿ ಕಡಿಮೆಯಾಗಿರುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಒಟ್ಟಾರೆ ಜನಸಂಖ್ಯೆ ಪ್ರಮಾಣ ಇಳಿಮುಖ ವಾದರೆ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಕಡಿಮೆ ಅಗಬಹುದು. ಆದರೆ ವಲಸೆ ಮತ್ತು ಆರ್ಥಿಕತೆ ಕುರಿತು ಸರ್ಕಾರಗಳು ಸಂಪೂರ್ಣ ಭಿನ್ನ ನೀತಿಗಳನ್ನು ಅಯ್ಕೆ ಮಾಡಿಕೊಳ್ಳಬೇಕಾಗಬಹುದು ಎಂದು ‘ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧ್ಯಯನ ಹೇಳಿದೆ.

ಜಪಾನ್, ಸ್ಪೇನ್ ಮತ್ತು ಇಟಲಿ ಸಹಿತ ಕೆಲವು ದೇಶಗಳ ಜನಸಂಖ್ಯೆ ಈ ಅವಧಿಯಲ್ಲಿ ಅರ್ಧಕ್ಕೆ ಇಳಿಯಲಿದೆ. ಆದರೆ ಮುಂದಿನ 80 ವರ್ಷಗಳಲ್ಲಿ ಆಫ್ರಿಕನ್ ದೇಶಗಳ ಜನಸಂಖ್ಯೆ ಮೂರು ಪಟ್ಟು ಏರಲಿದೆ. 2100ರ ವೇಳೆಗೆ 65 ವರ್ಷ ಮೇಲ್ಪಟ್ಟವರ ಸಂಖ್ಯೆ 240 ಕೋಟಿಯಿದ್ದು, ಯುವಜನರ ಸಂಖ್ಯೆಗಿಂತ ಹೆಚ್ಚಿರುತ್ತದೆ. 20 ವರ್ಷದೊಳಗಿನವರ ಸಂಖ್ಯೆ 170 ಕೋಟಿಯಿರುತ್ತದೆ ಎಂದು ಅಧ್ಯಯನ ಅಂದಾಜಿಸಿದೆ.

ಭಾರತ ಮೊದಲ ಸ್ಥಾನದಲ್ಲಿ?: ಭಾರತ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯ ದೇಶವಾಗಿ ಹೊರಹೊಮ್ಮಿ ಚೀನಾವನ್ನು ಹಿಂದಿಕ್ಕಲಿದೆ. 2048ರ ವೇಳೆಗೆ ಭಾರತದ ಜನಸಂಖ್ಯೆ 160 ಕೋಟಿ ಆಗಲಿದೆ. 2100ರ ವೇಳೆಗೆ 109 ಕೋಟಿಗೆ ಇಳಿದರೂ ಅದೇ ಜನಸಂಖ್ಯೆ ನಕ್ಷೆಯಲ್ಲಿ ಮೊದಲ ಸ್ಥಾನದಲ್ಲಿರುತ್ತದೆ. ಚೀನಾದ ಜನಸಂಖ್ಯೆ ಮುಂದಿನ 4 ವರ್ಷಗಳಲ್ಲಿ ಏರುಗತಿಯಲ್ಲಿ ಹೋಗಿ 140 ಕೋಟಿಗೆ ಮುಟ್ಟಲಿದೆ. ಆದರೆ 2100ರಲ್ಲಿ ಅದು 73 ಕೋಟಿ ಇಳಿಯಲಿದೆ.

ಕಾರಣವೇನು?: ಗರ್ಭನಿರೋಧಕ ಸಾಧನಗಳ ವ್ಯಾಪಕ ಲಭ್ಯತೆ ಮತ್ತು ಮಹಿಳೆ ಮತ್ತು ಬಾಲಕಿಯರ ಶಿಕ್ಷಣ ಅವಕಾಶಗಳು ಸುಧಾರಿಸುತ್ತಿರು ವುದು ಜನಸಂಖ್ಯೆ ಪ್ರಮಾಣ ಕುಸಿಯಲು ಪ್ರಮುಖ ಕಾರಣಗಳು ಎಂದು ಅಧ್ಯಯನ ಗುರುತಿಸಿದೆ.