ರಾಘವ ಶರ್ಮ ನಿಡ್ಲೆ,
ನವದೆಹಲಿ: ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಭಾರತ (ಚೀನಾ ನಂ.1) ಮುಂದಿನ ಏಳೆಂಟು ವರ್ಷಗಳಲ್ಲಿ ಅಗ್ರಸ್ಥಾನಕ್ಕೇರಲಿದೆ ಎನ್ನುತ್ತದೆ ವಿಶ್ವ ಜನಸಂಖ್ಯೆಯ ಡೇಟಾ ಶೀಟ್. ಸೀಮಿತ ನೈಸರ್ಗಿಕ ಸಂಪನ್ಮೂಲದ ಮಧ್ಯೆ ಮಿತಿ ಮೀರಿದ ಜನಸಂಖ್ಯೆ ಭಾರತಕ್ಕೆ ಎಲ್ಲ ರೀತಿಯಲ್ಲೂ ಆತಂಕಕಾರಿ.
ಹಾಗಿದ್ದರೂ, ಸರ್ಕಾರಗಳು ವೋಟ್ಬ್ಯಾಂಕ್ ರಕ್ಷಣೆಗಾಗಿಯೋ ಅಥವಾ ಮತ್ಯಾವುದೋ ಕಾರಣಕ್ಕಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಪರಿಣಾಮಕಾರಿ ಕಾನೂನುಗಳನ್ನು ಜಾರಿಗೊಳಿಸಲಿಲ್ಲ. ಕೆಲ ಕುಟುಂಬಗಳು ಸ್ವಯಂಪ್ರೇರಣೆಯಿಂದ ಮಕ್ಕಳ ಸಂಖ್ಯೆಯನ್ನು ಒಂದೆರಡಕ್ಕೆ ಸೀಮಿತಗೊಳಿಸಿದರೂ, ಸರ್ಕಾರದ ಜನ-ಜಾಗೃತಿ ಕಾರ್ಯಕ್ರಮಗಳನ್ನು ಬಹುಪಾಲು ಜನವರ್ಗ ಗಂಭೀರವಾಗಿ ಪರಿಗಣಿಸಿಲ್ಲ. ಇದರ ಪರಿಣಾಮವಾಗಿಯೇ, ಬಡತನ, ಶೋಷಣೆ, ತಾರತಮ್ಯ, ಸಾಂಕ್ರಾಮಿಕ ರೋಗಗಳು, ನಿರುದ್ಯೋಗ, ಭ್ರಷ್ಟಾಚಾರ ಸೇರಿ ಹತ್ತಾರು ಸಾಮಾಜಿಕ ಪಿಡುಗುಗಳು ಬಾಧಿಸುತ್ತಿವೆ. ಪ್ರತಿ ವರ್ಷ ವಿಶ್ವ ಜನಸಂಖ್ಯಾ ದಿನ ಬಂದು ಹೋದರೂ, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ನಮ್ಮ ಮಾನಸಿಕತೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿದೆಯೇ?
‘ದೇಶಹಿತ ಹಾಗೂ ಸಾಮಾಜಿಕ ಬದಲಾವಣೆ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ವಿಪಕ್ಷಗಳ ವಿರೋಧಗಳ ಮಧ್ಯೆಯೂ ಹಲವು ಮಸೂದೆಗಳನ್ನು ಅನುಮೋದನೆಗೊಳಿಸಿದೆ. ಈಗ ರಾಜ್ಯಸಭೆಯಲ್ಲೂ ಎನ್ಡಿಎ ಬಲ ಹೆಚ್ಚುತ್ತಿರುವುದರಿಂದ ಜನಸಂಖ್ಯೆ ನಿಯಂತ್ರಣ ಮಸೂದೆ ಬಗ್ಗೆ ಯೋಚಿಸಬೇಕು. ಭಾರತದಂಥ ದೇಶದಲ್ಲಿ ಕೆಲವೊಂದು ಅನಾಹುತಗಳನ್ನು ಕಾನೂನಿನ ಮೂಲಕವಷ್ಟೇ ತಹಬದಿಗೆ ತರಲು ಸಾಧ್ಯ. ಇಲ್ಲದಿದ್ದಲ್ಲಿ, ಮುಂದಿನ 10 ವರ್ಷಗಳಲ್ಲಿ ದೇಶದ ಸ್ಥಿತಿ ಊಹಿಸಲೂ ಸಾಧ್ಯವಿಲ್ಲ’ ಎನ್ನುವುದು ಕಾಂಗ್ರೆಸ್ನ ಮಾಜಿ ಸಂಸದರೊಬ್ಬರ ಅಭಿಪ್ರಾಯ.
ಸ್ವಯಂಜಾಗೃತಿ ಉತ್ತಮ: ‘ಗುಣಮಟ್ಟದ ಶಿಕ್ಷಣ ಮತ್ತು ಜನಸಂಖ್ಯೆ ಕುರಿತ ಸ್ವಯಂಜಾಗೃತಿಯಿಂದ ದೇಶದ ಕೆಲ ಭಾಗಗಳಲ್ಲಿ ಪರಿವರ್ತನೆಯಾಗಿದೆ. ಕರೊನಾ ನಿಯಂತ್ರಣಕ್ಕೆಂದು ಸರ್ಕಾರ ಮೊದಲಿಗೆ ಲಾಕ್ಡೌನ್ ಘೋಷಣೆ ಮಾಡಿತು, ನಂತರ ತೆರವುಗೊಳಿಸಿತು. ಇದಾದ ಬಳಿಕ, ಕೆಲವು ಪಟ್ಟಣಗಳಲ್ಲಿ ಜನರೇ ಸ್ವಯಂ ಲಾಕ್ಡೌನ್ಗೆ ಮುಂದಾದರು. ಅಂದರೆ, ಅವರಲ್ಲಿ ಜಾಗೃತಿ ಇದೆ ಎಂದಲ್ಲವೇ. ಹಾಗೆಯೇ ಜನಸಂಖ್ಯೆ ಕೂಡ. ಸರ್ಕಾರ ಹೇರಿದ ಜನಸಂಖ್ಯಾ ನಿಯಂತ್ರಣ ಕ್ರಮದಿಂದ ಏನಾಯ್ತು ಎನ್ನುವುದನ್ನು ತುರ್ತು ಪರಿಸ್ಥಿತಿಯಲ್ಲಿ ನೋಡಿದ್ದೇವೆ. ಸರ್ಕಾರಿ ಪ್ರೇರಿತ ಕಾನೂನು ಬೇಕೋ ಅಥವಾ ಸ್ವಯಂಪ್ರೇರಿತ ನಿಯಂತ್ರಣ ಒಳ್ಳೆಯದೋ ಎಂಬ ಬಗ್ಗೆ ಮೊದಲು ರಾಷ್ಟ್ರೀಯ ಚರ್ಚೆಯಾಗಬೇಕು’ ಎಂಬುದು ಹಾವೇರಿ ಸಂಸದ ಶಿವಕುಮಾರ್ ಉದಾಸಿ ಸಲಹೆ.
ಒಂದು ಮಗುವಿರುವ ದಂಪತಿ ಸ್ವಯಂಪ್ರೇರಣೆಯಿಂದ ಗರ್ಭತಡೆ ಶಸ್ತ್ರಚಿಕಿತ್ಸೆಗೆ ಮುಂದಾದರೆ ಅವರಿಗೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅಥವಾ ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಬಡತನ ರೇಖೆಗಿಂತ ಕೆಳಗಿರುವ ದಂಪತಿ ‘ಒಂದು ಮಗು’ವಿಗೆ ಸೀಮಿತಗೊಳಿಸಿದರೆ, ಗಂಡುಮಗುವಾಗಿದ್ದರೆ 60 ಸಾವಿರ ರೂಪಾಯಿ ಮತ್ತು ಹೆಣ್ಣುಮಗುವಾಗಿದ್ದರೆ 1 ಲಕ್ಷ ರೂಪಾಯಿ ನೆರವನ್ನೂ ನೀಡಬೇಕು ಎಂದು ಸಿಂಘ್ವಿ ಖಾಸಗಿ ಮಸೂದೆಯಲ್ಲಿ ಹೇಳಿದ್ದಾರೆ. ಹೀಗೆ, ಹಲವು ಚರ್ಚಾಯೋಗ್ಯ ಅಂಶಗಳು ಅದರಲ್ಲಿದೆ.
ಕಾಣದ ಕರೊನಾ ವೈರಾಣು ಸಮಾಜಕ್ಕೆ ಹತ್ತು ಹಲವು ಪಾಠ ಕಲಿಸಿದೆ/ಕಲಿಸುತ್ತಿದೆ. ಆತ್ಮನಿರ್ಭರತೆ ಬಗ್ಗೆ ಹತ್ತಾರು ಬಾರಿ ಪಾಠ ಮಾಡಿರುವ ಕೇಂದ್ರ ಸರ್ಕಾರ, ದೇಶದ ಸರ್ವತೋಮುಖ ಬೆಳವಣಿಗೆ ದೃಷ್ಟಿಯಿಂದ ಕರೊನಾ ಹಾವಳಿ ಕಡಿಮೆಯಾದ ಬಳಿಕವಾದರೂ ಈ ಗಂಭೀರ ವಿಷಯವನ್ನು ಸಂಸತ್ತಿನಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕಿರುವುದು ಅನಿವಾರ್ಯ.