ಮಹಾ ಕುಂಭಮೇಳದಿಂದ ತೀರ್ಥಕ್ಷೇತ್ರ ಪ್ರಯಾಗ್ರಾಜ್ ಜಾಗತಿಕವಾಗಿ ಗಮನ ಸೆಳೆದಿದ್ದು ಗೊತ್ತಿರುವಂಥದ್ದೇ. ಆದರೆ, ವಿಶ್ವನಾಥನ ಜ್ಯೋತಿರ್ಲಿಂಗವಿರುವ ಪುರಾತನ ನಗರಿ ಕಾಶಿ ಕೂಡ ಆಧ್ಯಾತ್ಮಿಕ (ಧಾರ್ವಿುಕ) ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಅಧ್ಯಾಯವನ್ನೇ ಬರೆದಿದೆ. ಕುಂಭಮೇಳ ನಡೆದ 45 ದಿನಗಳ ಅವಧಿಯಲ್ಲೇ (ಜನವರಿ 13ರಿಂದ ಫೆಬ್ರವರಿ 26) 4.32 ಕೋಟಿ ಭಕ್ತರು ವಿಶ್ವನಾರ್ಥನ ದರ್ಶನ ಪಡೆದುಕೊಂಡಿದ್ದಾರೆ. 2.32 ಕೋಟಿ ಜನರು ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ. 14 ದೇಶಗಳು ಮತ್ತು ಭಾರತದ 21 ರಾಜ್ಯಗಳ ಭಾವಿಕರು ಕಾಶಿಯನ್ನು ತಮ್ಮ ಭಾವಲೋಕದಲ್ಲಿ ಭದ್ರವಾಗಿಸಿಕೊಂಡಿದ್ದಾರೆ.
ಕುಂಭಮೇಳದ ಹೊತ್ತಲ್ಲಿ ಕಾಶಿಯ ಅಧ್ಯಾತ್ಮ ಪ್ರಕಾಶ ಮತ್ತಷ್ಟು ಪ್ರಖರವಾಗಿ ಬೆಳಗಿದೆ. ಹಾಗಾಗಿಯೇ, ದೇಶ-ವಿದೇಶಗಳ 4.32 ಕೋಟಿ ಭಕ್ತರು ಇದಕ್ಕೆ ಬೆರಗಾಗಿ, ಧನ್ಯತೆಯ ಅನುಭವ ಪಡೆದಿದ್ದಾರೆ. ಜತೆಗೆ ಪ್ರವಾಸೋದ್ಯಮ, ಸ್ಥಳೀಯ ಆರ್ಥಿಕತೆಗೆ ಸಿಕ್ಕಿರುವ ಬಲ ಕೂಡ ಅಸಾಧಾರಣ ಮತ್ತು ನಮ್ಮಲ್ಲಿ ಧಾರ್ವಿುಕ ಪ್ರವಾಸೋದ್ಯಮವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂಬುದಕ್ಕೆ ಸಮರ್ಥ ಮಾದರಿಯಾಗಿ, ಪ್ರೇರಣೆಯಾಗಿ ಕಾಶಿ ಗಮನ ಸೆಳೆಯುತ್ತಿದೆ. ವಿಶ್ವನಾಥನ ದರ್ಶನಕ್ಕೆ ಪ್ರತಿನಿತ್ಯ ಸರಾಸರಿ 1.5 ಲಕ್ಷ ಜನರು ಕಾಶಿಗೆ ಭೇಟಿ ನೀಡುತ್ತಾರೆ. ಕುಂಭಮೇಳದ ಅವಧಿಯಲ್ಲಿ ಈ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. 2019ರಲ್ಲಿ ಕಾಶಿಯಲ್ಲಿ ನಡೆದಿದ್ದ ಅರ್ಧ ಕುಂಭಮೇಳದ ವೇಳೆ 1.25 ಕೋಟಿ ಭಕ್ತರು ಆಗಮಿಸಿದ್ದರು. 50.76 ಲಕ್ಷ ಜನರು ವಿಶ್ವನಾಥನ ದರ್ಶನ ಪಡೆದಿದ್ದರು. 2025ರಲ್ಲಿ ಈ ಹಳೆಯ ದಾಖಲೆ ಮುರಿದು, ಭಕ್ತರ ಪ್ರವಾಹವೇ ಆಗಮಿಸಿದೆ.
ಸಾಮಾನ್ಯ ದಿನಗಳಲ್ಲೂ ಕಾಶಿಗೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರುತ್ತದೆ. ಆದರೆ, ಕುಂಭಮೇಳದ ಹೊತ್ತಲ್ಲಿ ಪ್ರಯಾಗ್ರಾಜ್ನಿಂದ ಕಾಶಿಗೆ 14 ದೇಶಗಳ ಪ್ರವಾಸಿಗರು ಆಗಮಿಸಿದ್ದರು. ಇದರಲ್ಲಿ ಅಮೆರಿಕ, ಮಲೇಷ್ಯಾ, ಬ್ರಿಟನ್, ರಷ್ಯಾ, ಇಂಗ್ಲೆಂಡ್, ಯೂಕ್ರೇನ್, ನೇಪಾಳ, ಬಾಂಗ್ಲಾದೇಶದಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಹಾಗೆಯೇ ಭಾರತದ 24 ರಾಜ್ಯಗಳು ಭಕ್ತರು ಕಾಶಿಯನ್ನು ಕಣ್ತುಂಬಿಕೊಂಡರು. ಈ ಪೈಕಿ ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಕೇರಳ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಉತ್ತರಾಖಂಡದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಕಿರಾಣಾ ಅಂಗಡಿ, ಜನರಲ್ ಸ್ಟೋರ್ ನಡೆಸುತ್ತಿರುವ ಅದೆಷ್ಟೋ ಜನ ತಾತ್ಕಾಲಿಕವಾಗಿ 1000ಕ್ಕೂ ಹೆಚ್ಚು ಭೋಜನಾಲಯಗಳನ್ನು ತೆರೆದರು. ಮತ್ತು ಇವು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಿದ್ದು ವಿಶೇಷ. ಕೆಲ ಭೋಜನಾಲಯಗಳು ಬೆಳಗ್ಗೆ 7ರಿಂದ ರಾತ್ರಿ 11 ಗಂಟೆಯವರೆಗೆ ಗ್ರಾಹಕರಿಗೆ ಸೇವಾಸೌಲಭ್ಯ ಒದಗಿಸಿದವು. ಅಷ್ಟೇ ಅಲ್ಲ, ಮನೆಯಂಥ ಊಟವನ್ನು ಜನರು ಬಯಸುತ್ತಿದ್ದರಿಂದ ಅದೆಷ್ಟೋ ಗೃಹಿಣಿಯರು ಮನೆಯ ವರಾಂಡವನ್ನೇ ಭೋಜನಾಲಯವನ್ನಾಗಿಸಿ ಮನೆಯಲ್ಲಿ ತಯಾರಿಸಿದ ಶುಚಿ-ರುಚಿ ಊಟವನ್ನು ಒದಗಿಸಿದರು.
ಶಿವರಾತ್ರಿ ದಿನದಂದು ಕೂಡ ಕಳೆದ ವರ್ಷದ ದಾಖಲೆ ಮುರಿದಿದೆ. 2024ರ ಮಾರ್ಚ್ 8ರ ಶಿವರಾತ್ರಿಗೆ 11.55 ಲಕ್ಷ ಜನರು ಇಲ್ಲಿ ಆಗಮಿಸಿದ್ದರು. ಆದರೆ, ಈ ಬಾರಿ (ಫೆಬ್ರವರಿ 26) 25 ಲಕ್ಷ ಭಕ್ತರು ಭೇಟಿ ನೀಡಿದರು. ಅಲ್ಲದೆ, ಶಿವರಾತ್ರಿಯಂದು ಮಂಗಳಾರತಿ ಬೆಳಗಲು ತಲಾ 2 ಸಾವಿರ ಪಾವತಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಈ ದರ 300 ರೂ. ಇದೆ.
ಕಾಶಿ ಸಿಹಿತಿಂಡಿಗಳಿಗೂ ಪ್ರಸಿದ್ಧ. 800ಕ್ಕೂ ಅಧಿಕ ಸ್ವೀಟ್ಸ್ ಅಂಗಡಿಗಳು ಮಧ್ಯರಾತ್ರಿಯವರೆಗೆ ವಹಿವಾಟು ನಡೆಸಿದವು. ಯಾತ್ರಿಕರು ಇಲ್ಲಿಂದ ಮರಳುವಾಗ ಮನೆಗಳಿಗೆ ಸಿಹಿತಿಂಡಿ ತೆಗೆದುಕೊಂಡು ಹೋಗಲು ಮರೆಯುತ್ತಿರಲಿಲ್ಲ. ಪರಿಣಾಮ, 45 ದಿನಗಳಲ್ಲಿ 72 ಕೋಟಿ ರೂ.ಗಳ ಸಿಹಿತಿಂಡಿಗಳು ಮಾರಾಟವಾದವು.
ಕಾಶಿಗೆ ಭೇಟಿ ನೀಡಿದವರ ಪೈಕಿ ಶೇಕಡ 70ಕ್ಕೂ ಅಧಿಕ ಭಕ್ತರು ಹಣೆಗೆ ಚಂದನದ ತಿಲಕ ಇರಿಸಿಕೊಂಡರು. ಕಾಶಿಯ ಒಂದು ಸಾವಿರ ಪಂಡಿತರು ತಿಲಕ ಇರಿಸಿಯೇ 30.27 ಕೋಟಿ ರೂ. ಗಳಿಸಿದ್ದು ದಾಖಲೆಯೇ ಸರಿ. ಒಬ್ಬರ ಹಣೆಗೆ ತಿಲಕವಿಡಲು 10 ರೂ. ಪಡೆಯಲಾಯಿತು ಎನ್ನುತ್ತಾರೆ ಸ್ಥಳೀಯರು.
ಕಾಶಿಯ ಗಂಗಾದಿಯಲ್ಲಿ ದೋಣಿ ಹಾಗೂ ಕ್ರೂಜ್ಗಳ ದಟ್ಟಣೆ ಆವರಿಸಿಕೊಂಡಿತ್ತು. 84 ಘಾಟ್ಗಳಲ್ಲಿ ಸಂಚರಿಸಿದ ದೋಣಿ ಹಾಗೂ ಕ್ರೂಜ್ಗಳ ಗಳಿಕೆ 3,240.8 ಕೋಟಿ ರೂಪಾಯಿ. ಘಾಟ್ಗಳಲ್ಲಿ 2500ಕ್ಕೂ ಅಧಿಕ ಸಣ್ಣ ಹಾಗೂ ದೊಡ್ಡ ದೋಣಿಗಳು, 10 ಕ್ರೂಜ್ಗಳು ಪ್ರಯಾಣಿಕರನ್ನು ಕರೆದುಕೊಂಡು ಹೋದವು.
ಕುಂಭಮೇಳದ ಅವಧಿಯಲ್ಲಿ 3844 ರೈಲುಗಳಿಂದ 54 ಲಕ್ಷ ಭಕ್ತರು ಕಾಶಿ ತಲುಪಿದರು.275 ವಿಶೇಷ ಬಸ್ಗಳ ಮೂಲಕ ತಲುಪಿದವರ ಸಂಖ್ಯೆ 15 ಲಕ್ಷ. ಲಖನೌವೊಂದರಿಂದಲೇ ವಾರಾಣಸಿಗೆ 125 ಬಸ್ಗಳು ಸಂಚರಿಸಿದವು. ಮೊದಲು ಇವುಗಳ ಸಂಖ್ಯೆ 78 ಇತ್ತು.
ಕಾಶಿಯಲ್ಲಿ ದೊಡ್ಡ ಹಾಗೂ ಸಣ್ಣಪುಟ್ಟ ಹೋಟೆಲ್ಗಳು ಸೇರಿ ಒಟ್ಟು 12 ಸಾವಿರ ಹೋಟೆಲ್, ಲಾಡ್ಜ್ಗಳು ಇವೆ. 45 ದಿನಗಳ ಕಾಲ ದಿನಕ್ಕೆ ಸರಾಸರಿ 5 ಲಕ್ಷ ಜನರು ಕಾಶಿಯ ಹೋಟೆಲ್, ಲಾಡ್ಜ್ಗಳಲ್ಲಿ ತಂಗಿದ್ದರು. ಈ ಅವಧಿಯಲ್ಲಿ 90 ಸಾವಿರ ರೂಮ್ಳು ಬುಕ್ ಆದವು. ಇದರಿಂದ ಆದ ವಹಿವಾಟು 1,620 ಕೋಟಿ ರೂಪಾಯಿ! ಈ ಬಾರಿ 1 ಸಾವಿರ ರೂ.ಗಳ ಸಾಮಾನ್ಯ ಕೋಣೆಯಿಂದ ಹಿಡಿದು, 90 ಸಾವಿರ ಬಾಡಿಗೆಯ ಲಗ್ಜರಿ ರೂಮ್ಳು ಬುಕ್ ಆಗಿದ್ದವು. ಕಾಶಿಗೆ ಆಗಮಿಸಿದವರು ವಾಸ್ತವ್ಯಕ್ಕಾಗಿ ಪ್ರತಿನಿತ್ಯ ಸರಾಸರಿ 1500 ರೂ. ವೆಚ್ಚ ಮಾಡಿದರು. 2019ರ ಅರ್ಧಕುಂಭದ ವೇಳೆ ದುಬಾರಿ ಬುಕ್ಕಿಂಗ್ ಎಂದರೆ 50 ಸಾವಿರ ರೂ. ಬಾಡಿಗೆಯ ಕೋಣೆಯಾಗಿತ್ತು.
ಗುಣಮಟ್ಟದ ರುದ್ರಾಕ್ಷಿ ಸಿಗುತ್ತದೆ ಎಂಬ ಕಾರಣಕ್ಕೆ ಕಾಶಿಗೆ ಬಂದವರು ತಪ್ಪದೇ ರುದ್ರಾಕ್ಷಿ ಖರೀದಿಸುವುದು ವಾಡಿಕೆ. ಈ ಬಾರಿ 100 ಕೋಟಿ ರೂ. ಮೌಲ್ಯದ ರುದ್ರಾಕ್ಷಿ ಹಾಗೂ 50 ಕೋಟಿ ರೂ. ಮೌಲ್ಯದ ಕುಬೇರ ಪ್ರತಿಮೆಗಳು ಮಾರಾಟವಾಗಿರುವುದು ದಾಖಲೆಯೇ ಸರಿ. ರುದ್ರಾಕ್ಷಿ ಮಾರಾಟದ 450ಕ್ಕೂ ಅಧಿಕ ಮಳಿಗೆಗಳಿವೆ. ಅವು ಕೂಡ ಇದೇ ಮೊದಲ ಬಾರಿಗೆ 24 ಗಂಟೆ ತೆರೆದಿದ್ದು, ವಹಿವಾಟು ನಡೆಸಿದವು. 2019ರಲ್ಲಿ ಕಾಶಿ ಕಾರಿಡಾರ್ ಉದ್ಘಾಟನೆಯ ಬಳಿಕ ಇದೇ ಮೊದಲ ಬಾರಿಗೆ ರುದ್ರಾಕ್ಷಿ ಹಾಗೂ ತಾಮ್ರದ ಪೂಜಾ ಸಾಮಗ್ರಿಗಳು ಭಾರಿ ಪ್ರಮಾಣದಲ್ಲಿ ಮಾರಾಟವಾದವು. ಸಾಮಾನ್ಯ ದಿನಗಳಲ್ಲಿ ಪ್ರತಿನಿತ್ಯ ಸರಾಸರಿ 50 ಜನರು ರುದ್ರಾಕ್ಷಿ ಖರೀದಿಸಿದರೆ, ಕುಂಭದ ಹೊತ್ತಲ್ಲಿ ಈ ಸಂಖ್ಯೆ 150ಕ್ಕೆ ತಲುಪಿತ್ತು.
ವಾರಾಣಸಿ, ಬನಾರಸ್ ಎಂದೂ ಕರೆಯಲ್ಪಡುವ ಕಾಶಿ ಧಾರ್ವಿುಕ-ಸಾಂಸ್ಕೃತಿಕ ಕೇಂದ್ರ, ಆರ್ಥಿಕಾಭಿವೃದ್ಧಿಯ ಪ್ರಮುಖ ತಾಣ, ಉದ್ಯಮ ರಂಗದ ನೆಚ್ಚಿನ ತಾಣ, ಪ್ರವಾಸೋದ್ಯಮಕ್ಕೆ ಹೊಸ ಭಾಷ್ಯ ಬರೆದ ಕ್ಷೇತ್ರ ಮಾತ್ರವಲ್ಲ ಜ್ಞಾನಾರ್ಜನೆಯಲ್ಲಿ ಅದ್ವಿತೀಯ ಕೊಡುಗೆ ನೀಡಿದ, ನೀಡುತ್ತಿರುವ ವಿಶಿಷ್ಟ ತಾಣವೂ ಹೌದು. ಹಿಂದೂಸ್ತಾನಿ ಶಾಸ್ತೀಯ ಸಂಗೀತದ ಬನಾರಸ್ ಘರಾಣಾ ಜನ್ಮತಾಳಿದ್ದೇ ಇಲ್ಲಿ. ಅಮೆರಿಕದ ಹೆಸರಾಂತ ಲೇಖಕ ಮಾರ್ಕ್ ಟ್ವೇನ್ ಈ ನಗರದ ಬಗ್ಗೆ ಬರೆಯುತ್ತ, ‘ಕಾಶಿ-ಬನಾರಸ ಇತಿಹಾಸಕ್ಕಿಂತಲೂ ಪ್ರಾಚೀನ. ಪರಂಪರೆಗಳಿಗಿಂತಲೂ ಹಳೆಯದು. ಇವುಗಳ ಒಟ್ಟು ಸಂಕಲನ ಮಾಡಿದಾಗ ಪ್ರಾಪ್ತವಾಗುವ ಸಂಗ್ರಹಕ್ಕಿಂತಲೂ ಎರಡು ಪಟ್ಟು ಪುರಾತನ’ ಎನ್ನುತ್ತಾನೆ.
ಬಹುಶಃ ಇದಕ್ಕೆ ಇರಬೇಕು ಈ ಚೆಂದದೂರಿಗೆ ಅದೆಷ್ಟು ಹೆಸರುಗಳು: ಅವಿಮುಕ್ತ ಕ್ಷೇತ್ರ (ಮುಕ್ತಿ ನೀಡುವ ನಗರಿ), ಆನಂದ ಕಾನನ (ಆನಂದ ಉಣಬಡಿಸುವ ತಾಣ), ಬ್ರಹ್ಮವರ್ತ (ಬ್ರಹ್ಮ ನೆಲೆಸಿದ ಜಾಗ) ಸುದರ್ಶನ ( ದರ್ಶನಕ್ಕೆ ಹೇಳಿ ಮಾಡಿಸಿದ ಜಾಗ), ಬನಾರಸ, ವಾರಾಣಸಿ (ವರುಣಾ ಮತ್ತು ಆಸಿ ನದಿಗಳ ಸಂಗಮ) ಜೊತೆಗೆ ಭಾರತದ ಧಾರ್ವಿುಕ ರಾಜಧಾನಿ, ಮಂದಿರಗಳ ನಗರಿ, ದೀಪಗಳ ನಗರಿ, ಜ್ಞಾನ ನಗರಿ ಎಂಬೆಲ್ಲ ವಿಶೇಷಣಗಳು.