ನ್ಯೂಸ್

ಸ್ತ್ರೀಶಕ್ತಿಯ ಆತ್ಮಾಭಿಮಾನದ ಸಂಕೇತ ಮಹಿಳಾ ದಿನ

ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಕೆಯ ಆತ್ಮಾಭಿಮಾನದ ಗುರುತಿಸುವಿಕೆಗಾಗಿ ಆಚರಿಸಲಾಗುತ್ತದೆ. ಸಮಾಜದಲ್ಲಿ ಆಕೆ ಘನತೆಯಿಂದ ಬದುಕಲು ಹಾಗೂ ಅವಳ ಅಭಿಪ್ರಾಯಕ್ಕೆ ಬೆಲೆ ಇದೆ ಎಂದು ಖಚಿತಪಡಿಸಲು ಇದು ಉತ್ತಮ ಸಂದರ್ಭ. ಅಂತೆಯೇ ಮಹಿಳೆಯರ ಒಟ್ಟಾರೆ ಸ್ಥಿತಿಗತಿಗಳನ್ನು ಅವಲೋಕಿಸುವ ಸಂದರ್ಭವೂ ಇದಾಗಿದೆ. ಮಹಿಳಾ ದಿನದ ಹಿನ್ನೆಲೆಯಲ್ಲಿ ಮೂವರು ಸಾಧಕಿಯರೊಂದಿಗೆ ವಿಜಯವಾಣಿ ನಡೆಸಿದ ಸಂವಾದದ ವಿವರ ಇಂತಿದೆ.

ಡಾ.ಕೆ.ಧರಣಿದೇವಿ ಮಾಲಗತ್ತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ
ಮದುವೆ ವಯಸ್ಸು 21 ಆಗಬೇಕೆ?: ವಯಸ್ಸು 21 ವರ್ಷ ಆಗಬೇಕೆಂಬ ವಾದ-ವಿವಾದ ಎರಡೂ ಇದೆ. ಮಕ್ಕಳ ಹಕ್ಕುಗಳ ಪ್ರಕಾರ 17 ವರ್ಷದ ಮಗು ಇಷ್ಟುಪಟ್ಟು ಮದುವೆ ಆಗಿದ್ದರೂ ಮೈನರ್ ಎಂದು ಕೇಸ್ ಆಗುತ್ತದೆ. ಆಕೆಯನ್ನು ಎಲ್ಲೋ ಒಂದು ಕಡೆ ಸಂರಕ್ಷಿಸಿ ಇಡುತ್ತಾರೆ. ಪೋಕ್ಸೋ ಕೇಸ್ ಆಗುತ್ತದೆ. ಅವಳ ಆಯ್ಕೆಯಾಗಿದ್ದರೂ ಅದನ್ನು ನಡೆಸಿಕೊಂಡು ಹೋಗಲು ಆಗಲ್ಲ. ಮುಂದೆ ಮದುವೆ ವಯಸ್ಸು 21 ಅಂತಾದರೆ 20 ವರ್ಷ 11 ತಿಂಗಳಾದರೂ ತನ್ನ ನಿರ್ಧಾರ ಮಾಡಿಕೊಳ್ಳಲು ಬಿಡುವುದಿಲ್ಲ. ಇಂತಹ ವಾದ ಇವೆ. ಮಹಿಳೆಗೆ 18 ವಯಸ್ಸಿನ ಮಿತಿ ಹಾಕಿದರೆ ಹುಡುಗನಿಗೂ 18 ವಯಸ್ಸು ಮಾಡಲಿ. 21 ವರ್ಷದ ನಿಯಮ ಇದ್ದೂ 20 ವರ್ಷದವರು ಮದುವೆಯಾದಲ್ಲಿ ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಕೇಳುವವರಿದ್ದಾರೆ. ಇಂಥ ಗೊಂದಲ ಬರುತ್ತದೆ ಎಂದು ಡಾ.ಕೆ. ಧರಣೀದೇವಿ ಉತ್ತರಿಸಿದರು.

ಕಾಲ ಬದಲಾಗಿದೆ: ಆಶಾದಾಯಕ ವಿಷಯ ಏನೆಂದರೆ, ಮಾನವೀಯತೆ, ಮಾನವ ಹಕ್ಕುಗಳ ಬಗ್ಗೆ ತುಡಿಯುವ ಮನಸ್ಸು ಎಲ್ಲಿವೆಯೋ ಅಲ್ಲಿ ಮಹಿಳೆಯರು ಹೆಚ್ಚು ಸಾಧನೆ ಮಾಡಿದ್ದಾರೆ, ಬಹುತೇಕ ಸಂದರ್ಭದಲ್ಲಿ ಮಹಿಳೆ ಎಲ್ಲಿ ಸಾಧನೆ ಮಾಡಿದ್ದಾಳೆ ಎಂದರೆ ಆಕೆಯ ಸುತ್ತ ಪುರುಷರು ಒಳ್ಳೆಯವರಿದ್ದಾಗ ಮಾತ್ರ. ಆರೋಗ್ಯಕರ ಮನಸ್ಸುಳ್ಳವರ ಜತೆ ಆಕೆ ಇದ್ದಾಳೆ ಎಂದುಕೊಳ್ಳಬಹುದು. ಮಹಿಳಾ ವಿಮೋಚನೆ ಎಂದರೆ ಹೆಣ್ಣುಮಕ್ಕಳನ್ನು ಕೆಲವು ಬಂಧಗಳಿಂದ ಮುಕ್ತಮಾಡುವುದು, ಪಂಜರದಿಂದ ಬಿಡುಗಡೆ ಮಾಡುವುದೂ ಅಂಥ ಅಲ್ಲ. ಸಮಾಜದಲ್ಲಿ ನಂಬಿಕೊಂಡು ಬಂದಂತಹ ಪರಂಪರಾಗತ ಮಹಿಳಾ ವಿರೋಧಿಯಾದ ಮೌಲ್ಯಗಳಿದ್ದರೆ ಅದರಿಂದ ಬಿಡುಗಡೆ ಮಾಡುವುದು. ಮಹಿಳೆ ಅಧೀನಳು ಮತ್ತು ಪುರುಷ ಪ್ರಧಾನ ವ್ಯಕ್ತಿಯಾಗಿರುತ್ತಾನೆ ಅನ್ನುವ ನಂಬಿಕೆಯ ತಳಹದಿಯ ಮೇಲೆ ಬರಲಾಗಿದೆ. ಅದನ್ನು ಮೀರಿದವರೂ ಇದ್ದಾರೆ. ಸಾಕಷ್ಟು ಉದಾಹರಣೆಯೂ ಇದೆ. ಪುರುಷರಲ್ಲೂ ಸಾಕಷ್ಟು ಪ್ರೋತ್ಸಾಹ ಕೊಡುವವರು ಇರುತ್ತಾರೆ. ಒಂದು ಕಾಲಕ್ಕೆ ಮಹಿಳೆಯರಿಗೆ ದೇಹ ಮತ್ತು ಬುದ್ಧಿಯನ್ನು ನಿಯಂತ್ರಿಸುವ ಹಕ್ಕೂ ಇರಲಿಲ್ಲ. ಅದರ ನಿರ್ಧಾರವನ್ನು ಬೇರೆಯವರು ತೆಗೆದುಕೊಳ್ಳುವ ಕಾಲವಿತ್ತು. ಐದಾರು ವರ್ಷಕ್ಕೆ ಹುಡುಗಿಗೆ ಮದುವೆ ಮಾಡುವುದು, ಆಕೆ ಇನ್ನೊಂದು ಮನೆಗೆ ಹೋಗುವುದು, ಆಕೆ ಬದುಕು ಏನು ಎಂದು ತಿಳಿದುಕೊಳ್ಳುವ ಮುನ್ನವೇ ಬಸುರಾಗುವುದು ಎಂಬಂತಿತ್ತು. ಈಗ ಹಾಗಿಲ್ಲ. ಬಹಳಷ್ಟು ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಬರುವಂತಾಗಿದೆ, ಶಿಕ್ಷಣ ಪಡೆಯುವಂತಾಗಿದೆ, ಹಿಂದಿಗಿಂತ ಹೆಚ್ಚು ಶಕ್ತರಾಗಿದ್ದು ತಮ್ಮ ನಿರ್ಧಾರ ತಾವೇ ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದಾಳೆ. ಪೂರಕ ವಾತಾವರಣವೂ ಇದೆ.

ಪೊಲೀಸರು ಕಲ್ಲು ಹೃದಯದವರಲ್ಲ: ಜಂಡರ್ ಸ್ಟೀರಿಯೋನಂತೆ ಪೊಲೀಸರ ಬಗ್ಗೆ ಮುಂಚೆಯಿಂದಲೂ ಒಂದು ರೀತಿಯ ಅಭಿಪ್ರಾಯವಿದೆ. ಮಕ್ಕಳು ಊಟ ಮಾಡದೇ ಇದ್ದಾಗ, ಹಠ ಮಾಡುವಾಗ ಪೊಲೀಸ್​ಗೆ ಕೊಡ್ತಿನಿ ಎಂದು ಭಯ ಬಿತ್ತಲಾಗಿದೆ. ಹುಲಿ ಸಿಂಹದ ರೀತಿ ಚಿತ್ರಿಸಲಾಗಿದೆ. ಪೊಲೀಸ್ ಇಲಾಖೆಯನ್ನು ಮುಂಚೆ ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಆದರೆ ಇಂದು ಸೇವೆ ನೀಡುವ ಪರಿಕಲ್ಪನೆಯಲ್ಲಿ ಕೆಲಸ ಮಾಡುತ್ತಿದೆ. ಯಾವ ರೀತಿ ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕೆಂದು ನಿರಂತರವಾಗಿ ತರಬೇತಿ ನೀಡಲಾಗುತ್ತಿದೆ. ನೊಂದವರು ಸಹಾಯ ಅರಸಿ ಬಂದಾಗ ಯಾವ ರೀತಿ ನಡೆದುಕೊಳ್ಳಬೇಕೆಂದು ತಿಳಿಸಿಕೊಡಲಾಗುತ್ತಿದೆ. ಪೊಲೀಸರು ಹಾಗೂ ಪೊಲೀಸ್ ಠಾಣೆ ಕುರಿತು ಗ್ರಹಿಕೆ ಮೇಲೆ ಅಭಿಪ್ರಾಯ ರೂಪಿತವಾಗಿದೆ. ಠಾಣೆಗೆ ಭೇಟಿಕೊಡದವರು ಅದೇ ಗ್ರಹಿಕೆಯಲ್ಲಿದ್ದಾರೆ.

ಪರೀಕ್ಷೆಗಳಲ್ಲಿ ಸಾಧನೆಗೈದವರು ಹೋಗೋದೆಲ್ಲಿಗೆ?: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹುಡುಗಿಯರೇ ಮೇಲುಗೈ ಎಂದು ಪತ್ರಿಕೆಗಳು ಪ್ರತಿ ವರ್ಷ ವರದಿ ಮಾಡುತ್ತವೆ. ಮೇಲುಗೈ ಸಾಧಿಸಿದವರು ಎಲ್ಲಿ ಹೋದರು? ಎಲ್ಲಿ ಹೊದರೆಂದರೆ ಮನೆಯಲ್ಲಿ ಪಾತ್ರೆ ತೊಳೆದು, ಸದ್​ಗೃಹಿಣಿಯಾಗಿ ಜೀವನ ಮಾಡುತ್ತಿದ್ದಾರೆ ಎಂಬ ಮಾತಿದೆ. ಅನೇಕ ಸಂದರ್ಭದಲ್ಲಿ ಗಂಡ- ಹೆಂಡತಿ ಸಮಾನ ಶಿಕ್ಷಣ ಹೊಂದಿರುತ್ತಾರೆ. ಪ್ರಾಯಶಃ ಹೆಂಡತಿಗೇ ಹೆಚ್ಚು ಅಂಕ ಬಂದಿರುತ್ತದೆ. ಆದರೆ, ಉದ್ಯೋಗದ ಅವಕಾಶ ಬಂದಾಗ ಗಂಡನಿಗೆ ಸಿಗುತ್ತದೆ. ಉದ್ಯೋಗದಲ್ಲಿ ಪ್ರೋತ್ಸಾಹ ಕೂಡ ಗಂಡನಿಗೇ ಸಿಗುತ್ತದೆ.ಒಂದೇ ಸಲಕ್ಕೆ ಬದಲಾವಣೆ ಆಗಬೇಕೆಂದು ನಿರೀಕ್ಷೆ ಮಾಡುವುದು ಕಷ್ಟ. ಮಹಿಳೆ ಮೊದಲು ಶಿಕ್ಷಣ ಕ್ಷೇತ್ರದಿಂದ ವಂಚಿತಳಾಗಿದ್ದಳು. ನಿಧಾನವಾಗಿ ಪ್ರಾಥಮಿಕ ಶಿಕ್ಷಣ ಕೊಡಬಹುದೆಂಬ ಆಲೋಚನೆ ಸಮಾಜದಲ್ಲಿ ಬಂತು. ಆದರೆ, ಉನ್ನತ ಶಿಕ್ಷಣ ಪಡೆದರೆ ಮದುವೆ ಕಷ್ಟ ಎಂಬ ತರ್ಕವೂ ಇತ್ತು. ಉದ್ಯೋಗಂ ಪುರುಷ ಲಕ್ಷಣಂ ಎಂದು ವಾದ ಮಾಡುತ್ತಿದ್ದರು. ಆದರೆ ಈಗ ಮದುವೆಯಾಗುವಾಗ ಹುಡುಗಿ ಜಾಬ್​ನಲ್ಲಿರಬೇಕೆಂದು ಗಂಡು ಬಯಸುತ್ತಿದ್ದಾನೆ. ಹೀಗೆ ಹಂತಹಂತವಾಗಿ ಬದಲಾವಣೆ ಆಗುತ್ತಿದೆ.

ಡಾ. ನಾಗಲಕ್ಷ್ಮೀ ಚೌಧರಿ ಮಹಿಳಾ ಆಯೋಗದ ಅಧ್ಯಕ್ಷೆ
ಈಗಲೂ ಗಂಡನ ಪೂಜೆ ಸರಿಯೇ?: ಭಾರತದಲ್ಲಿ ಕುಟುಂಬ ವ್ಯವಸ್ಥೆ ಮತ್ತು ವಿವಾಹ ಪದ್ಧತಿ ಮಹಿಳೆಯರನ್ನು ಕಟ್ಟಿಹಾಕಿದೆ. ಗಂಡನನ್ನು ಪೂಜಿಸುವ ಭೀಮನ ಅಮಾವಾಸ್ಯೆ ಈಗಲೂ ಇದೆ. ಗಂಡ ದೇವರು ಅಂದುಕೊಳ್ಳುವವರು ಅಂದುಕೊಳ್ಳಲಿ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅಸಮಾಧಾನ ತೋರ್ಪಡಿಸಿದರು. ಒಳಗಿರುವ ಆತ್ಮಕ್ಕೆ ಗಂಡೂ ಇಲ್ಲ, ಹೆಣ್ಣು ಇಲ್ಲ. ಇದೊಂದು ಹೊದಿಕೆ ಅಷ್ಟೆ. ಎಲ್ಲಿವರೆಗೂ ಜಾಗೃತಿ ಉಂಟಾಗಿ ಮಹಿಳೆಯನ್ನು ವಿದ್ಯಾವಂತಳನ್ನಾಗಿ ಮಾಡಿ ಅವಳ ಕಾಲ ಮೇಲೆ ಅವಳು ನಿಲ್ಲುವಂತೆ, ಪರಿವರ್ತನೆ ಆಗುವುದಿಲ್ಲವೋ ಅಲ್ಲಿವರೆಗೂ ಇಂಥವು ನಡೆದೇ ನಡೆಯುತ್ತದೆ ಎಂದರು. ಗಂಡನನ್ನು ದೈವ ಎಂದು ಪೂಜೆ ಮಾಡಿ ಅವನಿಗೆ ಎಲ್ಲವನ್ನೂ ಕೊಟ್ಟವಳು ಸ್ವರ್ಗಕ್ಕೆ ಲಾಯಕ್ಕಿದ್ದಾಳೆ ಎಂದು ಮನುಸ್ಮೃತಿಯಲ್ಲಿದೆ. ಅದು ಉಲ್ಟಾ ಏಕಿಲ್ಲ? ಇದೆಲ್ಲ ಬದಲಾವಣೆ ಆಗಬೇಕು.

ಧೈರ್ಯದಿಂದ ಮುಂದೆ ಬರಬೇಕು: ಮಹಿಳೆಯರು ದೌರ್ಜನ್ಯಕ್ಕೊಳಗಾದ ಸಂದರ್ಭದಲ್ಲಿ ದೂರು ಕೊಡಲು ಹಿಂದೆಮುಂದೆ ನೋಡುತ್ತಾರೆ. ಅಂತವರು ನೇರವಾಗಿ ಸಖಿ ಒನ್ ಸ್ಟಾಪ್ ಸೆಂಟರ್​ಗೆ ಬರಬೇಕು. ಅಲ್ಲಿ ವೈದ್ಯರು, ವಕೀಲರು, ಕೌನ್ಸೆಲಿಂಗ್ ಸೇರಿ ಅಗತ್ಯ ಸೇವೆ ಸಿಗಲಿದೆ. ಇದನ್ನು ಬಳಸಿಕೊಂಡರೆ ಅನುಕೂಲವಾಗಲಿದೆ. ಮಹಿಳಾ ಆಯೋಗದಂಥ ಹೆಲ್ಪ್ ಡೆಸ್ಕ್ ಇದ್ದು, ಮುಂದಿನ ದಿನಗಳಲ್ಲಿ ಸಹಾಯವಾಣಿ ಆರಂಭಿಸುವ ಉದ್ದೇಶವಿದೆ.

ಗ್ಯಾರಂಟಿ ಸಬಲೀಕರಣ: ಗ್ಯಾರಂಟಿ ಯೋಜನೆಯಿಂದ ಮಹಿಳಾ ಸಬಲೀಕರಣವಾಗಲಿದೆ. ಉಚಿತ ಬಸ್ ವ್ಯವಸ್ಥೆಯಿಂದ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ರೂ. ವರೆಗೂ ಉಳಿತಾಯವಾಗುತ್ತಿದೆ, ವೃತ್ತಿನಿರತ ಮಹಿಳೆಯರಿಗೆ ಅನುಕೂಲವಾಗುತ್ತಿದೆ. ಉಳಿತಾಯವಾಗುವ ಹಣದಿಂದ ಇತರ ಖರ್ಚು ನೋಡಿಕೊಳ್ಳಲು ಅವಕಾಶವಾಗುತ್ತಿದೆ. ಉದ್ಯೋಗನಿಧಿ ಆರ್ಥಿಕ ನೆರವು ನೀಡುವುದಲ್ಲದೆ ಉದ್ಯೋಗ ಕೊಡಿಸಲು ನೆರವಾಗುವ ಕಾರ್ಯಕ್ರಮ. ಗ್ಯಾರಂಟಿಯನ್ನು ಫ್ರೀ ಬೀ ಎನ್ನುವುದು ಸರಿಯಲ್ಲ. ಮುಂದುವರಿದ ಸ್ವಿಡ್ಜರ್ ಲ್ಯಾಂಡ್​ನಲ್ಲೂ ಇಂತಹ ಕಾರ್ಯಕ್ರಮಗಳು ಇವೆ.

ಭಾವನಾತ್ಮಕ ವಾರ್: ಉತ್ತರ ಕರ್ನಾಟಕದಲ್ಲಿ ಬಡತನ, ಬಾಲ್ಯ ವಿವಾಹದ ಪ್ರಮಾಣ ಹೆಚ್ಚಿದೆ. ಮಹಿಳಾ ಆಯೋಗಕ್ಕೆ ಸಾಕಷ್ಟು ದೂರು ಬರುತ್ತವೆ. ಕ್ರಮಕ್ಕೆ ನಾವು ಪೊಲೀಸರಿಗೆ ಸೂಚನೆ ಕೊಡಬಹುದು. ಆದರೆ ಬಾಲಕಿಯ ಕುಟುಂಬ ಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ. ಅವರಿಗೆ ನಾವು ಒಂದು ರೀತಿ ವಾರ್ ಮಾಡಿದಂತೆ ಕಾಣುತ್ತದೆ. ಇವರ್ಯಾರೋ ಬಂದರು, ನಮ್ಮ ಹೆಣ್ಣು ಮಗಳನ್ನು ಕಳಿಸಬೇಕೆಂದಿದ್ದೆವು ಎಂದು ನೋಡುತ್ತಾರೆ. ಆ ಮಾನಸಿಕ ಹಾಗೂ ಕಾನೂನಿನ ನಡುವಿನ ಭಾವನಾತ್ಮಕ ಹೋರಾಟ.

ಭ್ರಷ್ಟಾಚಾರ ಕಡಿಮೆ: ರಾಜಕಾರಣದಲ್ಲಿ ಹೆಣ್ಣಿಗೆ ಬಹಳ ಕಡಿಮೆ ಜಾಗ. ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್, ಜಯಲಲಿತಾ, ಮಮತಾ ಬ್ಯಾನರ್ಜಿ ಇವರೆಲ್ಲರನ್ನೂ ಅಧಿಕಾರ ಸಿಕ್ಕಾಗ ಸೋಲಿಸಲು ಸಾಧ್ಯವಾಗಲಿಲ್ಲ. ಆ ಶಕ್ತಿ ಅವಳಲ್ಲಿದೆ. ಹೆಣ್ಣು ಕೆಲಸ ಮಾಡಿದ ಕಡೆ ಭ್ರಷ್ಟಾಚಾರ ಕಡಿಮೆ. ಪ್ರೀತಿಯಿಂದ ಕೆಲಸ ಮಾಡುತ್ತಾಳೆ. ಕೆಲವೊದು ಸಂದರ್ಭದಲ್ಲಿ ನಿಬಂಧನೆಗಳಿಂದ ಹೊರಬರಲು ಕಷ್ಟವಾಗುತ್ತದೆ. ಆದರೆ ಅವರಿಗೆ ಶಕ್ತಿ ಬಂತೆಂದರೆ ಯಾರೂ ತಡೆಯಲು ಆಗಲ್ಲ.

ಸ್ತ್ರೀ ಯಶಸ್ಸಿನ ಹಿಂದೆ ಪುರುಷರು: ಯಶಸ್ವಿ ಮಹಿಳೆ ಹಿಂದೆ ಅನೇಕ ಪುರುಷರಿರುತ್ತಾರೆ. ತಂದೆ, ಅಣ್ಣ, ಗಂಡನ ಶ್ರಮ, ಪ್ರೋತ್ಸಾಹ ಇರುತ್ತದೆ. ಬಾಲ್ಯ ವಿವಾಹಕ್ಕೆ ನಾನೇ ಉದಾಹರಣೆ ಎಂದ ಪುಷ್ಪಲತಾ ಸುರೇಶ್, ನಾನು 10ನೇ ತರಗತಿಯಲ್ಲಿದ್ದಾಗ ದೊಡ್ಡಪ್ಪನ ಸಲಹೆಯಂತೆ ಅಪ್ಪ ಮದುವೆ ಮಾಡಿದರು. ಆದರೆ, ಗಂಡನ ಮನೆಯಲ್ಲಿ ಓದಿಸಿದರು, ಕೆಲಸ ಮಾಡುತ್ತೇನೆಂದರೆ ಪ್ರೋತ್ಸಾಹ ನೀಡಿದರು.

ಛಲ ಬೇಕು: ಮೊದಲು ಹೆಣ್ಣಿಗೆ ಛಲ ಬೇಕು. ಅವಳು ಮನಸ್ಸು ಮಾಡಿದರೆ, ಏನನ್ನೂ ತಡೆಯಲು ಸಾಧ್ಯವಿಲ್ಲ. ಅಣೆಕಟ್ಟಲು ಸಾಧ್ಯವಿಲ್ಲ. ಹೆಣ್ಣು ಚಿಂತನೆ ಮಾಡಿ ಇಂತಹ ಸ್ಥಾನದಲ್ಲಿರಬೇಕೆಂದರೆ ಖಂಡಿತ ತಲುಪೇ ತಲುಪುತ್ತಾಳೆ.

ಹೋಲಿಕೆ ಬಿಡಿ: ಸಾಮಾಜಿಕ ಜಾಲತಾಣ ಮಹಿಳೆ ಯರಿಗೆ ದೊಡ್ಡ ಅಸ್ತ್ರ. ಅದನ್ನು ಬಳಸಿ ಕೊಂಡು ಅನಿಸಿಕೆ, ಅಭಿಪ್ರಾಯ ಮುಕ್ತವಾಗಿ ಹೇಳಿಕೊಳ್ಳಲು ಅವಕಾಶವಿದೆ. ಆದರೆ, ಇಂದು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿ ಕೊಳ್ಳುತ್ತಾ ಕುಗ್ಗುತ್ತಿರುವ ಬೆಳವಣಿಗೆ ನಡೆಯುತ್ತಿದೆ. ಸಾಮಾಜಿಕ ಜಾಲ ತಾಣ ಇರುವುದು ಒಳ್ಳೆಯದಕ್ಕೆ ಎಂಬ ಅರಿವು ಇರಬೇಕಾಗುತ್ತದೆ.

ಗ್ಯಾರಂಟಿ ಸ್ವರೂಪ ಬದಲಾಗಲಿ: ಪ್ರತಿಯಾಗಿ ಉದ್ಯಮಿ ಪುಷ್ಪಲತಾ ಸುರೇಶ್ ತಾವು ಅನುಭವಿಸುತ್ತಿರುವ ಸಮಸ್ಯೆ ಹಾಗೂ ವಾಸ್ತವ ಬಿಡಿಸಿಟ್ಟರು. ಉಚಿತ ಪ್ರಯಾಣದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ, ಬಸ್ ಸಂಖ್ಯೆ ಹೆಚ್ಚಿಸಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗುವುದಕ್ಕೂ ಪರದಾಡುವಂತಾಗಿದೆ. ಉಚಿತವಾಗಿ ಹಣ ಕೊಡುತ್ತಾ ಹೋದರೆ ಕೆಲಸಕ್ಕೆ ಏಕೆ ಜನ ಬರುತ್ತಾರೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲೇ ಸಾಕಷ್ಟು ಉದ್ಯೋಗ ಖಾಲಿ ಇವೆ. ಅಲ್ಲಿಗೆ ಉದ್ಯೋಗಿಗಳನ್ನು ಕಳಿಸಿ, ಅವರಿಗೆ ಬೇಕಿದ್ದರೆ ಸರ್ಕಾರ ಪ್ರೋತ್ಸಾಹಧನ ನೀಡಿದರೆ ಉತ್ತಮ.

ಅಪ್​ಗ್ರೇಡ್​ಗೂ ಇದೆ ಅವಕಾಶ: ಪುರುಷರು ಕರಿಯರ್ ಬ್ರೇಕ್ ಪಡೆದುಕೊಳ್ಳುವುದು ಅಪರೂಪ, ಮಹಿಳೆಯರು ಹೆಚ್ಚು ಬ್ರೇಕ್ ತೆಗೆದುಕೊಳ್ಳುತ್ತಾರೆ. ನಂತರ ಫಿನಿಕ್ಸ್ನಂತೆ ಮತ್ತೆ ಧುಮ್ಮಿಕ್ಕಬೇಕು. ಈ ಬ್ರೇಕ್ ಅವಧಿಯಲ್ಲಿ ತಮ್ಮನ್ನು ತಾವು ಅಪ್​ಗ್ರೇಡ್ ಮಾಡಿಕೊಳ್ಳಬೇಕೆಂಬುದು ನನ್ನ ವಾದ.