ಕೊಪ್ಪಳ: ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಆಹ್ವಾನ ಶುರುವಾಗಿರುವ ಪರಿಣಾಮವಾಗಿ ಆಧಾರ್ ಕೇಂದ್ರಗಳಲ್ಲಿ ಬೆಳ್ಳಬೆಳಗ್ಗೆ ಬಂದು ಜನರು ಸಾಲು ನಿಲ್ಲುತ್ತಿದ್ದಾರೆ. ಕೆಲವರಂತೂ ನಾಲ್ಕೈದು ದಿನ ಕಾದು ಆಧಾರ್ ಅಪ್ಡೇಟ್ ಮಾಡಿಸುತ್ತಿರುವ ಪ್ರಕರಣ ಕೊಪ್ಪಳದಲ್ಲಿ ಕಂಡುಬಂದಿದೆ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆದಾರ್ ಕಾರ್ಡ್ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದು ಕಡ್ಡಾಯವಾಗಿರುತ್ತದೆ. ಗ್ರಾಮೀಣ ಭಾಗದಲ್ಲಿ ಅನೇಕ ಜನರಲ್ಲಿ ಮೊಬೈಲ್ ಇದ್ದರೂ ಆಧಾರ್ ಜತೆ ಲಿಂಕ್ ಆಗಿರುವುದಿಲ್ಲ. ಇನ್ನು ಕೆಲವರಲ್ಲಿ ಮೊಬೈಲೇ ಇರುವುದಿಲ್ಲ. ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಆಧಾರ್ ಕೇಂದ್ರಗಳಿಗೇ ಜನರು ತೆರಳಬೇಕಾಗಿದೆ. ಆದರೆ ಒಂದು ಕೇಂದ್ರದಲ್ಲಿ ದಿನವೊಂದಕ್ಕೆ ಕೇವಲ 40 ಜನರ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಸಾಧ್ಯವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಜನರು ಬೆಳಗ್ಗೆ 5 ಗಂಟೆಯಿಂದಲೇ ಬಂದು ಆಧಾರ್ ಲಿಂಕ್ ಮಾಡಿಸಲು ಜನರು ಕಾಯುತ್ತಿದ್ದಾರೆ. ಈ ಹಿನ್ನೆಲೆ ಆಧಾರ್ ಸೆಂಟರ್ಗೆ ಬೆಳ್ಳಂಬೆಳಿಗ್ಗೆ ಆಧಾರ್ ಸೆಂಟರ್ಗೆ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದಿನಕ್ಕೆ ಕೇವಲ 40 ಜನರಿಗಷ್ಟೇ ಲಿಂಕ್ ಮಾಡಲು ಸಾಧ್ಯ ಇರುವುದರಿಂದ, ಟೋಕನ್ ವ್ಯವಸ್ಥೆ ಶುರುವಾಗಿದೆ. ಪರಿಣಾಮವಾಗಿ ಟೋಕನ್ ಪಡೆದು ನಾಲ್ಕೈದು ದಿನಗಳ ಕಾಲ ಆಧಾರ್ ಅಪ್ಡೇಟ್ಗಾಗಿ ಜನರು ಕಾದು ಕುಳಿತಿದ್ದಾರೆ.
ದೂರದ ಊರುಗಳಿಂದ ಬಂದು ಟೋಕನ್ ಪಡೆಯೋದು ತುಂಬಾ ಕಷ್ಟ ಎನ್ನುತ್ತಿರುವ ಮಹಿಳೆಯರು "ಸರ್ಕಾರ ಆಧಾರ್ ಅಪ್ಡೇಟ್ ಬೇಗ ಮಾಡಿಸಿದ್ರೆ ಅನುಕೂಲ" ಎನ್ನುತ್ತಿದ್ದಾರೆ. ವೃದ್ದೆಯರು, "ನಾಲ್ಕೈದು ದಿನ ಅಲೆದಾಡೋದು ಹೇಗೆ, ನಮ್ಮ ಖರ್ಚು ವ್ಯಚ್ಚ ಏನೂ ಮಾಡಬೇಕೆಂದು" ಅಳಲು ತೋಡಿಕೊಳ್ಳುತ್ತಿದ್ದಾರೆ.