ನ್ಯೂಸ್

ಫೋಟೋಶೂಟ್​ ನೆಪದಲ್ಲಿ ಪತಿಯನ್ನು ನದಿಗೆ ತಳ್ಳಿದ ಪತ್ನಿ! ಸ್ಥಳೀಯರ ಸಹಾಯದಿಂದ ಬದುಕುಳಿದ ಗಂಡ | Husband

ರಾಯಚೂರು: ತುಂಬಿ ಹರಿಯುವ ಕೃಷ್ಣಾ ನದಿಯ ಬಳಿ ಫೋಟೋ ತೆಗೆಸಿಕೊಳ್ಳುವ ನೆಪದಲ್ಲಿ ಪತ್ನಿಯೇ ಗಂಡನನ್ನು ನದಿಗೆ ನೂಕಿದ ಘಟನೆ ರಾಯಚೂರಿನ ಗುರ್ಜಾಪುರದಲ್ಲಿ ವರದಿಯಾಗಿದೆ.

ಸೇತುವೆಯಿಂದ ನದಿಗೆ ನೂಕಿದ ಪತ್ನಿ, ಗಂಡನ ಸಹಾಯಕ್ಕೆ ಮುಂದಾಗಿಲ್ಲ. ಘಟನೆ ಅರಿತ ಸ್ಥಳೀಯರು ಕೂಡಲೇ ನದಿಗೆ ಜಿಗಿದು, ಬಡಪಾಯಿ ಗಂಡನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ತಾಲೂಕಿನ ಗುರ್ಜಾಪುರ ಬಳಿಯ ಸೇತುವೆ ಹತ್ತಿರ ಸಂಭವಿಸಿದೆ. ಜೋಡಿಯನ್ನು ನವದಂಪತಿ ಎನ್ನಲಾಗಿದ್ದು, ಸೇತುವೆಯಿಂದ ಪತ್ನಿಯೇ ನನ್ನನ್ನು ಉದ್ದೇಶಪೂರ್ವಕವಾಗಿ ನೂಕಿದಳು ಎಂದು ವ್ಯಕ್ತಿ ಆರೋಪಿಸಿದ್ದಾನೆ.

ಗಂಡ ನೀರಿಗೆ ಬಿದ್ದು ಸಹಾಯಕ್ಕೆ ಕಿರುಚಾಡುತ್ತಿದ್ದರೆ, ಸೇತುವೆ ಮೇಲೆ ನಿಂತಿದ್ದ ಪತ್ನಿ ಮಾತ್ರ ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ನಿಂತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅನುಮಾನಗೊಂಡ ಸ್ಥಳೀಯರು, ವ್ಯಕ್ತಿಯನ್ನು ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.