ನ್ಯೂಸ್

ಹೆರಿಗೆಯಾದ ಕೆಲವೇ ನಿಮಿಷಗಳ ಅಂತರದಲ್ಲಿ ತಬ್ಬಲಿಯಾದ ಶಿಶು!

ಮಂಡ್ಯ: ಹೆರಿಗೆಯಾದ ಕೆಲವೇ ಸಮಯದ ಅಂತರದಲ್ಲಿ ಬಾಣಂತಿ ಮೃತ ಪಟ್ಟಿದ್ದಾರೆ. ಇದೀಗ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವನ್ನಪ್ಪಿದ್ದಾರೆ ಎಂದು ಚೇತನ್ ಮೆಟರ್ನಿಟಿ ನರ್ಸಿಂಗ್ ಹೋಂ ಮುಂಭಾಗ ಕುಟುಂಬಸ್ಥರು ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಕೆಆರ್ ಪೇಟೆ ತಾಲೂಕಿನ ದೊಡ್ಡಯಾಚೇನಹಳ್ಳಿ ಗ್ರಾಮದ ನೇತ್ರಾವತಿ (29) ಮೃತ ದುರ್ದೈವಿ.

ಹೆರಿಗೆಗೂ ಮುನ್ನ ಆರಾಮವಾಗಿದ್ದ ನೇತ್ರಾವತಿ, ಹೆರಿಯಾದ ಕೆಲವೇ ಸಮಯದ ಅಂತರದಲ್ಲಿ ಮೃತಪಟ್ಟಿದ್ದಾರೆ. ಆಸ್ಪತ್ರೆಯ ವೈದ್ಯ ಡಾ. ದಿನೇಶ್ ವಿರುದ್ಧ ಕರ್ತವ್ಯ ಲೋಪ ಆರೋಪ ಕೇಳಿ ಬಂದಿದೆ. ಇದೀಗ ನವಜಾತ ಶಿಶು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದೆ.

ನಿನ್ನೆ(ಜ.09) ಸಂಜೆ 5:30ರ ವೇಳೆಗೆ ನೇತ್ರಾವತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದಿದ್ದ ವೈದ್ಯರು, ಕೆಲ ಹೊತ್ತಿನ ನಂತರ ಮೈಸೂರು ಆಸ್ಪತ್ರೆಗೆ ಕರೆದುಕೊಂಡ ಹೋಗಲು ಶಿಫಾರಸ್ಸು ಮಾಡಿದ್ದಾರೆ. ವೈದ್ಯರ ಸೂಚನೆಯಂತೆ ಮೈಸೂರಿಗೆ ತೆರಳುತ್ತಿದ್ದಂತೆ ನೇತ್ರಾವತಿ ಸಾವನ್ನಪ್ಪಿದ್ದಾರೆ.

ಮೃತಪಟ್ಟಿರುವ ನೇತ್ರಾವತಿ ಮೃತದೇಹವನ್ನು ಕುಟುಂಬಸ್ಥರು ತಂದು ಆಸ್ಪತ್ರೆ ಒಳಗಿಡಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕುಟುಂಬಸ್ಥರ ನಡುವಿನ ತಳ್ಳಾಟ ನೂಕಾಟದಿಂದ ಶವ ಕೆಳಗೆ ಬಿದ್ದಿದೆ. ಮಗಳ ಸಾವಿಗೆ ನ್ಯಾಯ ಬೇಕು, ಶವವಾಗಿ ಅವಳು ಬೇಡ, ಜೀವಂತವಾಗಿ ಬೇಕು ಎಂದು ಹೇಳುತ್ತಾ ಕುಟುಂಬಸ್ಥರು ರೋಧಿಸಿದ್ದಾರೆ.