ನ್ಯೂಸ್

ಹಸೆಮಣೆ ಏರಲು ಸಜ್ಜಾದ ಯುವತಿಗೆ ಕಾದಿತ್ತು ಕಂಟಕ! ಹೆತ್ತವರ ಖುಷಿ ಕಸಿದುಕೊಂಡಿತು ಅದೊಂದು ಘಟನೆ

ಆಂಧ್ರಪ್ರದೇಶ: ಮಗಳ ಮದುವೆಯನ್ನು ಅದ್ಧೂರಿಯಾಗಿ, ವಿಜೃಂಭಣೆಯಾಗಿ ಮಾಡಬೇಕು ಎಂಬುದು ಹೆತ್ತವರ ಮಹಾದಾಸೆ. ಬಾಲ್ಯದಿಂದಲೂ ಕಷ್ಟಪಟ್ಟು, ಮಕ್ಕಳನ್ನು ಸಾಕುವ ಪೋಷಕರು, ತಮ್ಮ ಕನಸನ್ನು ಮಗಳ ಮುಖೇನ ಈಡೇರಿಸಿಕೊಳ್ಳಲು ಬಯಸುತ್ತಾರೆ. ಇದೇ ರೀತಿ ಇಲ್ಲೊಂದು ಕುಟುಂಬ ಕೂಡ ತಮ್ಮ ಮನೆಯ ಹೆಣ್ಣು ಮಗಳ ವಿವಾಹ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಬಹಳ ಕಾತರದಿಂದ ಕಾಯುತ್ತಿತ್ತು. ಆದರೆ, ವಿಧಿಯ ಲೆಕ್ಕಾಚಾರ ಅವರ ಖುಷಿಯನ್ನು ಕಸಿದುಕೊಳ್ಳುವುದಾಗಿತ್ತು ಎಂದು ಯಾರಿಗೂ ತಿಳಿದಿರಲಿಲ್ಲ. ಈ ದಾರುಣ ಘಟನೆ ಅನಂತಪುರ ಜಿಲ್ಲೆಯ ತಾಡಿಪತ್ರಿಯಲ್ಲಿ ಸಂಭವಿಸಿದೆ.

ಮದುವೆಯಾಗಿ ಗಂಡನ ಮನೆಗೆ ಹೋಗಬೇಕಿದ್ದ ಅಚ್ಚುಮೆಚ್ಚಿನ ಮಗಳು, ನೇರ ಮಸಣಕ್ಕೆ ಸೇರಿದ್ದು ಹೆತ್ತವರಲ್ಲಿ ಅರಗಿಸಿಕೊಳ್ಳಲಾಗದ ನೋವಾಗಿ ಕಾಡುತ್ತಿದೆ. ಪುತ್ರಿ ತನ್ನ ಗಂಡ ಮತ್ತು ಮಕ್ಕಳೊಂದಿಗೆ ಮನೆಯಲ್ಲಿ ಸಂತೋಷದಿಂದ ಬದುಕ ಸಾಗಿಸಲಿ ಎಂದು ಆಕೆಯ ಭವಿಷ್ಯಕ್ಕಾಗಿ ಹಾರೈಸುತ್ತಿದ್ದ ವೆಂಕಟರೆಡ್ಡಿಪಲ್ಲಿಯ ಶ್ರೀರಾಮಿರೆಡ್ಡಿ ಮತ್ತು ಲಕ್ಷ್ಮೀದೇವಿ ದಂಪತಿ, ಇಂದು ಮಗಳನ್ನು ಕಳೆದುಕೊಂಡು ದುಃಖದ ಕಡಲಲ್ಲಿ ಮುಳುಗಿ ಹೋಗಿದ್ದಾರೆ. ತಮ್ಮ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಶ್ರಮಿಸಿದ ತಂದೆ ಶ್ರೀರಾಮಿರೆಡ್ಡಿ ಅವರ ಪುತ್ರಿಯರಾದ ಗೀತವಾಣಿ ಮತ್ತು ಬಿಂದು ಸಾಫ್ಟ್​ವೇರ್ ಇಂಜಿನಿಯರ್​​ಗಳಾಗಿ ಬದುಕು ಕಟ್ಟಿಕೊಂಡರೆ, ಪುತ್ರ ಬಿ.ಟೆಕ್​ ಮುಗಿಸಿ, ಆಗ ತಾನೇ ಕೆಲಸ ಹುಡುಕುತ್ತಿದ್ದ. ಈ ವೇಳೆ ಮಗಳು ಗೀತವಾಣಿ ಮದುವೆ ನಿಶ್ಚಯಿಸಿದ್ದ ಪೋಷಕರು, ಅಂದು ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು.

ದಾರಿ ಮಧ್ಯೆ ಅಪಘಾತ

ನಿಶ್ಚತಾರ್ಥದ ಸಲುವಾಗಿ ತನಗೆ ಬೇಕಾದ ವಸ್ತುಗಳನ್ನು ಕುಟುಂಬಸ್ಥರು ತಂದುಕೊಡಲು ಮುಂದಾದರೂ ಸಹ ತಾನೇ ಹೋಗಬೇಕೆಂದು ಬಯಸಿದ ವಧು ಗೀತವಾಣಿ, ತನ್ನ ಕಿರಿಯ ಸಹೋದರ ನಾರಾಯಣ ರೆಡ್ಡಿ ಜತೆ ಬೈಕ್‌ನಲ್ಲಿ ತಾಡಿಪತ್ರಿಗೆ ತೆರಳಿದಳು. ಅಲ್ಲಿ ಎಂಗೇಜ್​ಮೆಂಟ್​ಗೆ ಬೇಕಿದ್ದ ವಸ್ತುಗಳನ್ನು ತೆಗೆದುಕೊಂಡು ರಾತ್ರಿ 8.30ರ ಸುಮಾರಿಗೆ ತಮ್ಮ ಊರಿಗೆ ವಾಪಾಸ್​ ಆಗುವಾಗ ದಾರಿ ಮಧ್ಯೆ ರಸ್ತೆ ಅಪಘಾತದಿಂದ ಸಂಭವಿಸಿದೆ. ಕಲ್ಲುಗಳ ಲೋಡ್‌ನೊಂದಿಗೆ ತಾಡಿಪತ್ರಿಗೆ ಬರುತ್ತಿದ್ದ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ವಧು ಸ್ಥಳದಲ್ಲೇ ಸಾವನ್ನಪ್ಪಿದರೆ, ಸಹೋದರ ರೆಡ್ಡಿಗೆ ಗಂಭೀರ ಗಾಯಗಳಾಗಿವೆ.

ಶೋಕದ ಮನೆ

ಅಪಫಾತ ಸಂಭವಿಸಿದ ಬೆನ್ನಲ್ಲೇ ಸ್ಥಳೀಯರು ಹತ್ತಿರದ ಆಸ್ಪತ್ರೆಗೆ ದಾಖಲಿಸುವುದರೊಳಗೆ ಗೀತವಾಣಿ ಪ್ರಾಣಪಕ್ಷಿ ಹಾರಿಹೋಗಿತ್ತು. ತೆಳ್ಳಾರಿನಲ್ಲಿ ನಡೆಯಬೇಕಿದ್ದ ನಿಶ್ಚಿತಾರ್ಥಕ್ಕೂ ಮುನ್ನವೇ ಯುವತಿ ಸಾವನ್ನಪ್ಪಿದ್ದು, ಮದುವೆ ಸಂತಸದಲ್ಲಿದ್ದ ಕುಟುಂಬಗಳಿಗೆ ಬರಸಿಡಿಲು ಬಡಿದಂತಾಗಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮದುವೆಯಾಗಿ ಬಾಳಿ ಬದುಕಬೇಕಿದ್ದ ಮಗಳು ಇಹಲೋಕ ತ್ಯಜಿಸಿದ ಸುದ್ದಿ ಕೇಳಿ ಹೆತ್ತವರು ಕಂಗಾಲಾಗಿದ್ದಾರೆ,(ಏಜೆನ್ಸೀಸ್).