ರಾಂಚಿ: ಫಸಲಿಗೆ ಬಂದಿದ್ದ ಬೆಳೆಯನ್ನು ಹಂದಿಗಳು ನಾಶಪಡಿಸಿದ್ದಾವೆ ಎಂಬ ಆರೋಪದ ಮೇಲೆ ಗುಂಪೊಂದು ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಹೊಡೆದು ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜಧಾನಿ ರಾಂಚಿಯ ಹೊರವಲಯದಲ್ಲಿ ನಡೆದಿದೆ.
ರಾಂಚಿ ನಗರದಿಂದ ಸುಮಾರು 25 ಕಿಲೋಮೀಟರ್ ದೂರವಿರುವ ಒರ್ಮಾಂಜಿ ಪೊಲೀಸ್ ಠಾಣೆ ವ್ಯಾಪ್ತಿಯ ಝಂಝಿ ತೋಲಾ ಎಂಬ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತರನ್ನು ಜನೇಶ್ವರ್ ಬೇಡಿಯ (42), ಸರಿತಾ ದೇವಿ (39), ಸಂಜು ದೇವಿ (25) ಎಂದು ಗುರುತಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ರಾಂಚಿ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಹ್ಯಾರಿಸ್ ಬಿನ್ ಜಮಾನ್ ಕೆಲವು ದಿನಗಳ ಹಿಂದೆ ಫಸಲಿಗೆ ಬಂದಿದ್ದ ಬೆಳೆಗಳನ್ನು ತಾವು ಸಾಕಿದ ಹಂದಿಗಳು ನಾಶಪಡಿಸಿವೆ ಎಂದು ಎರಡು ಕುಟುಂಬಗಳ ನಡುವೆ ಗಲಾಟೆಯಾಗಿತ್ತು. ಗುರುವಾರ ಬೆಳಗ್ಗೆ ಇದೇ ವಿಚಾರವಾಗಿ ಪುನಃ ಗಲಾಟೆಯಾಗಿದ್ದು, 10 ಮಂದಿ ಇದ್ದ ಗುಂಪೊಂದು ಇಬ್ಬರು ಮಹಿಳೆಯರು ಸೇರಿದಂತೆ ಮೂವರನ್ನು ಹೊಡೆದು ಕೊಲೆ ಮಾಡಿದೆ.
ಪ್ರಕರಣದ 10 ಆರೋಪಿಗಳು ತಲೆಮಾರಿಸಿಕೊಂಡಿದ್ದು, ಅವರನ್ನು ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ. ಆರೋಪಿಗಳನ್ನು ಪ್ರತ್ಯಕ್ಷದರ್ಶಿಗಳು ಹಾಗೂ ಮೃತರ ಕುಟುಂಬಸ್ಥರು ಗುರುತು ಹಿಡಿದಿರುವುದರಿಂದ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ರಾಂಚಿ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಹ್ಯಾರಿಸ್ ಬಿನ್ ಜಮಾನ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.