ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಅಪರಿಚಿತ ಮಹಿಳೆಯರ ಶವ ಪತ್ತೆಯಾಗಿದ್ದರ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯರ ನಿಯೋಗ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ. ಮೊನ್ನೆಯಷ್ಟೇ ಮತ್ತೊಂದು ಅಪರಿಚಿತ ಮಹಿಳೆಯ ಶವ ಪತ್ತೆಯಾದ್ದರಿಂದ ಈ ನಿಯೋಗ ದೂರು ನೀಡಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದೆ.
ಜನವರಿಯಲ್ಲಿ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಇನ್ನೂ ಆ ಕುರಿತ ತನಿಖೆ ನಿರ್ಣಾಯಕ ಹಂತ ತಲುಪಿಲ್ಲ. ಇದೀಗ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲೂ ಡ್ರಮ್ನೊಳಗೆ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಹೀಗಾಗಿ ಈ ಕೊಲೆ ಪ್ರಕರಣಗಳ ಕುರಿತು ಸೂಕ್ತ ತನಿಖೆ ಆಗಬೇಕು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಶ್ರೀ ನೇತೃತ್ವದ ತಂಡ ಡಿಜಿಗೆ ದೂರು ನೀಡಿದೆ.
ಕಳೆದ ಮೂರ್ನಾಲ್ಕು ತಿಂಗಳಲ್ಲಿ ಮೂವರು ಮಹಿಳೆಯರ ಶವ ಪತ್ತೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದವರು ಚುನಾವಣೆ ಬಗ್ಗೆಯೇ ಯೋಚನೆ ಮಾಡುತ್ತಿದ್ದಾರೆ. ನಗರದಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಅನುಮಾನ ಮೂಡಿದೆ ಎಂದಿರುವ ಅವರು, ಈ ಮಹಿಳೆಯರ ಸಾವಿನ ಕುರಿತು ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.