ನ್ಯೂಸ್

ಪ್ಲೀಸ್​ ನನ್ನನ್ನು ಕಾಪಾಡು... ಪ್ರಿಯಕರನಿಗೆ ಮಸೇಜ್​ ಮಾಡಿದ ಪ್ರೇಯಸಿ ಶವವಾಗಿ ಪತ್ತೆ​, ಭೀಕರ ಮರ್ಯಾದೆ ಹತ್ಯೆ! Chilling text

Chilling text : ನನ್ನನ್ನು ಕಾಪಾಡು ಎಂದು ಬಾಯ್​ಫ್ರೆಂಡ್​ಗೆ ಇನ್​ಸ್ಟಾಗ್ರಾಂನಲ್ಲಿ ಮೆಸೇಜ್​ ಕಳುಹಿಸಿದ ಯುವತಿಯೊಬ್ಬಳು ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾದ ಆಘಾತಕಾರಿ ಘಟನೆ ಗುಜರಾತಿನಲ್ಲಿ ನಡೆದಿದೆ. ಆರಂಭದಲ್ಲಿ ಇದೊಂದು ಸಹಜ ಸಾವು ಎಂದು ಭಾವಿಸಲಾಗಿತ್ತು. ಆದರೆ, ಪೊಲೀಸ್​ ತನಿಖೆಯ ಸಂದರ್ಭದಲ್ಲಿ ಇದೊಂದು ಮರ್ಯಾದೆ ಹತ್ಯೆ ಎಂಬ ಭಯಾನಕ ಸಂಗತಿ ಹೊರಬಿದ್ದಿದೆ.

ಈ ಘಟನೆ ಗುಜರಾತಿನ ಬನಸ್ಕಾಂತ ಜಿಲ್ಲೆಯಲ್ಲಿ ನಡೆದಿದೆ. ಹತ್ಯೆಯಾದ ಯುವತಿಯನ್ನು ಚಂದ್ರಿಕಾ ಚೌಧರಿ (18) ಎಂದು ಗುರುತಿಸಲಾಗಿದೆ. ಬನಸ್ಕಾಂತ ಜಿಲ್ಲೆಯ ಥಾರಡ್​ನ ದಾಂಟಿಯಾ ಮನೆಯಲ್ಲಿ ಆಕೆಯ ತಂದೆ ಸೇಧಾಭಾಯಿ ಪಟೇಲ್ ಮತ್ತು ಚಿಕ್ಕಪ್ಪ ಶಿವಭಾಯ್ ಪಟೇಲ್​ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಸದ್ಯಕ್ಕೆ ಇಬ್ಬರನ್ನು ಬಂಧಿಸಲಾಗಿದ್ದು, ಯುವತಿಯ ತಂದೆ ಸೇಧಾಭಾಯಿ ನಾಪತ್ತೆಯಾಗಿದ್ದಾರೆ ಎಂದು ಸಹಾಯಕ ಪೊಲೀಸ್​ ವರಿಷ್ಠಾಧಿಕಾರಿ ಸುಮನ್​ ನಳಾ ತಿಳಿಸಿದ್ದಾರೆ.

ಮೃತ ಚಂದ್ರಿಕಾ, ಹರೀಶ್ ಚೌಧರಿ ಎಂಬಾತನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ, ಪ್ರೀತಿಗೆ ಆಕೆಯ ಪಾಲಕರ ವಿರೋಧವಿತ್ತು. ಅಲ್ಲದೆ, ತಾವು ನೋಡಿದ ಹುಡುಗನನ್ನು ಮದುವೆಯಾಗಬೇಕೆಂದು ಬಯಸಿದ್ದರು. ತನ್ನ ಮನೆಯವರು ಮದುವೆಗೆ ಒಪ್ಪುವುದಿಲ್ಲ ಎಂಬುದು ಚಂದ್ರಿಕಾಗೆ ಮನವರಿಕೆಯಾಗಿತ್ತು. ಬಳಿಕ ತನ್ನ ಪ್ರಿಯಕರ ಹರೀಶ್​ಗೆ ಇನ್​ಸ್ಟಾಗ್ರಾಂ ಮೂಲಕ ಮಸೇಜ್​ ಮಾಡಿ ಆ ವಿಚಾರವನ್ನು ತಿಳಿಸಿದಳು. ಅಲ್ಲದೆ, ತನ್ನ ಜೀವಕ್ಕೆ ಅಪಾಯವಿದೆ ಎಂದು ಜೂನ್ 24ರಂದು ರಾತ್ರಿ ಹರೀಶ್​ಗೆ ಸಂದೇಶ ಕಳುಹಿಸಿದ್ದಳು. ಆದಷ್ಟು ಬೇಗೆ ನನ್ನನ್ನು ನನ್ನ ಕುಟುಂಬದಿಂದ ದೂರವಿಡುವಂತೆ ಆಕೆ ಕೇಳಿಕೊಂಡಿದ್ದಳು.

ಪ್ಲೀಸ್​ ಬಂದು ನನ್ನನ್ನು ಕರೆದುಕೊಂಡು ಹೋಗಿ, ಇಲ್ಲದಿದ್ದರೆ, ನನ್ನ ಮನೆಯವರು ನನ್ನ ಇಚ್ಛೆಗೆ ವಿರುದ್ಧವಾಗಿ ನನಗೆ ಮದುವೆ ಮಾಡುತ್ತಾರೆ. ನಾನೇನಾದರೂ ಮದುವೆಗೆ ಒಪ್ಪದಿದ್ದರೆ, ಅವರು ನನ್ನನ್ನು ಕೊಲ್ಲುತ್ತಾರೆ. ನನ್ನನ್ನು ಕಾಪಾಡಿ ಎಂದು ಆಕೆ ಇನ್​ಸ್ಟಾಗ್ರಾಂನಲ್ಲಿ ಹರೀಶ್​ಗೆ ಮಸೇಜ್​ ಮಾಡಿದ್ದಳು.

ಮಸೇಜ್​ ಮಾಡಿದ ಕೆಲವೇ ದಿನಗಳಲ್ಲಿ ಚಂದ್ರಿಕಾಳ ಶವ ಆಕೆಯ ಮನೆಯಲ್ಲಿ ಪತ್ತೆಯಾಗಿದೆ. ಆರಂಭದಲ್ಲಿ, ಇದು ಆತ್ಮಹತ್ಯೆ ರೀತಿ ಕಂಡುಬಂತು. ಆದರೆ, ಹರೀಶ್​ ದಾಖಲಿಸಿದ ಪೊಲೀಸ್​ ದೂರು ತನಿಖೆಗೆ ದಾರಿ ಮಾಡಿಕೊಟ್ಟಿತು. ತನ್ನ ಪ್ರೇಯಸಿ ಮರಣದ ವಿಚಾರ ತಿಳಿದ ಹರೀಶ್, ಪೊಲೀಸರ ಬಳಿ ಹೋಗಿ ಚಂದ್ರಿಕಾ ಸ್ವಾಭಾವಿಕವಾಗಿ ಸಾಯಲಿಲ್ಲ, ಬದಲಾಗಿ ಕೊಲೆಯಾಗಿದ್ದಾಳೆ ಎಂದು ದೂರು ದಾಖಲಿಸಿ ಗಂಭೀರ ಆರೋಪ ಮಾಡಿದನು. ಬಳಿಕ ತನಿಖೆ ಆರಂಭಿಸಿದ ಪೊಲೀಸರಿಗೆ ಅಸಲಿ ಸಂಗತಿ ತಿಳಿಯಿತು.

ತನಿಖೆಯ ವಿವರಗಳನ್ನು ಬಹಿರಂಗಪಡಿಸಿದ ಸುಮನ್​ ನಳಾ, ಮೃತ ಚಂದ್ರಿಕಾಳ ತಂದೆ ಮತ್ತು ಆಕೆಯ ಚಿಕ್ಕಪ್ಪ ಸಂಚು ರೂಪಿಸಿ ಮಾಡಿದ ಕೊಲೆ ಇದು. ಕೊಲೆಗೆ ಕೆಲವು ದಿನಗಳ ಮೊದಲು, ಚಂದ್ರಿಕಾ, ಹರೀಶ್ ಜತೆ ಮನೆಯಿಂದ ಹೊರಟು ಹೋಗಿದ್ದಳು. ಆಕೆಯ ಕುಟುಂಬ ಕಾಣೆಯಾದ ದೂರು ದಾಖಲಿಸಿದ ಬಳಿಕ ಆಕೆಯನ್ನು ಪತ್ತೆಹಚ್ಚಿ ಮನೆಗೆ ಕಳುಹಿಸಲಾಯಿತು. ತನ್ನ ಹೆತ್ತವರೇ ನನ್ನನ್ನು ಕೊಲ್ಲಬಹುದು ಎಂಬ ಭಯ ಚಂದ್ರಿಕಾಗೆ ಬಂದ ಕೂಡಲೇ ಹರೀಶ್‌ಗೆ ಸಂದೇಶ ಕಳುಹಿಸಿದಳು. ಇದರ ಬೆನ್ನಲ್ಲೇ ಹರೀಶ್​, ನ್ಯಾಯಾಲಯದಲ್ಲಿ ಹೇಬಿಯಸ್ ಅರ್ಜಿಯನ್ನು ಸಲ್ಲಿಸಿದನು. ಆದರೆ ವಿಚಾರಣೆಯ ದಿನಾಂಕಕ್ಕೂ ಮುಂಚೆಯೇ, ಆಕೆ ಸಾವಿಗೀಡಾದಳು. ಆಕೆ ಕೋರ್ಟ್​ಗೆ ಹಾಜರಾಗಬೇಕಿತ್ತು. ಆದರೆ, ಆಕೆಯ ಕುಟುಂಬ ಸಹಜ ಸಾವು ಎಂದು ಹೇಳುವ ಮರಣ ಪ್ರಮಾಣಪತ್ರ ಸಲ್ಲಿಸಿತು.

ಆದರೆ, ಹರೀಶ್‌ಗೆ ಅದು ಮನವರಿಕೆಯಾಗಲಿಲ್ಲ. ಆಕೆಯ ಸಾವಿನಲ್ಲಿ ಅನುಮಾನ ಮೂಡಿತು. ಬಳಿಕ ಚಂದ್ರಿಕಾ ಸಾವಿನ ತನಿಖೆ ಕೋರಿ ಪೊಲೀಸರಿಗೆ ಪತ್ರ ಬರೆದರು. ತನಿಖೆಯ ಸಮಯದಲ್ಲಿ, ಪೊಲೀಸರಿಗೆ ಕೆಲವೊಂದು ಅನುಮಾನಗಳ ಮೂಡಿತು. ಸಹಜ ಸಾವು ಅಥವಾ ಆತ್ಮಹತ್ಯೆ ಸಂದರ್ಭದಲ್ಲಿಯೂ ಕುಟುಂಬ ವೈದ್ಯರನ್ನು ಸಂಪರ್ಕಿಸುವುದು ಸಾಮಾನ್ಯ. ಆದರೆ, ಹುಡುಗಿಯನ್ನು ಎಂದಿಗೂ ವೈದ್ಯರ ಬಳಿಗೆ ಕರೆದೊಯ್ಯಲಿಲ್ಲ. ಆಕೆಯ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ನಡೆಸಲಾಯಿತು. ಸಾವಿನ ನಂತರ ಯಾವುದೇ ಹತ್ತಿರದ ಸಂಬಂಧಿಕರನ್ನು ಕರೆಯಲಿಲ್ಲ. ಅಲ್ಲದೆ, ಪಾಲನ್‌ಪುರದಲ್ಲಿ ಓದುತ್ತಿರುವ ಆಕೆಯ ಸಹೋದರನನ್ನು ಸಹ ಕರೆಯಲಿಲ್ಲ. ಇದು ಕುಟುಂಬವು ಏನನ್ನೋ ಮರೆಮಾಡಲು ಪ್ರಯತ್ನಿಸುತ್ತಿದೆ ಎಂಬ ಅನುಮಾನಕ್ಕೆ ಕಾರಣವಾಯಿತು ಎಂದು ಎಎಸ್‌ಪಿ ನಳಾ ಹೇಳಿದರು.

ಚಂದ್ರಿಕಾ ಹರೀಶ್​ ನನ್ನನ್ನು ಮರೆಯದಿದ್ದರೆ ಜೂನ್ 24ರ ರಾತ್ರಿಯೇ ಆಕೆಯನ್ನು ಕೊಲ್ಲಲು ಆಕೆಯ ತಂದೆ ಮತ್ತು ಚಿಕ್ಕಪ್ಪ ಯೋಜಿಸಿದ್ದರು. ಆಕೆಯ ಕೊಲೆ ಯಾವುದೇ ಅನುಮಾನಕ್ಕೆ ಕಾರಣವಾಗದಂತೆ ನೋಡಿಕೊಳ್ಳಲು ಅವರು ಮೂರು ಹಂತದ ಯೋಜನೆಯನ್ನು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೊದಲು, ಆಕೆಗೆ ನಿದ್ರೆ ಮಾತ್ರೆಗಳನ್ನು ನೀಡಿದರು. ಇದಾದ ನಂತರ ಆಕೆಯ ಕತ್ತು ಹಿಸುಕಿ, ಆತ್ಮಹತ್ಯೆ ಎಂದು ಬಿಂಬಿಸಲು ಅವಳ ದೇಹವನ್ನು ನೇತುಹಾಕಿದರು. ರಾತ್ರಿಯಲ್ಲಿ ಅವಳ ದೇಹವನ್ನು ನೋಡಿದವರು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ನಂಬಿದ್ದರು. ಆದರೆ ಬೆಳಗ್ಗೆ, ಆಕೆಯದ್ದು ಸಹಜ ಸಾವು ಎಂದು ಇತರರಿಗೆ ಹೇಳಿದರು. ಅವರ ಹೇಳಿಕೆಯಲ್ಲೇ ಗೊಂದಲ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಂತ್ರಿಕ ವಿಶ್ಲೇಷಣೆ, ಸಾಂದರ್ಭಿಕ ಸಾಕ್ಷ್ಯಗಳು ಮತ್ತು ಸಂಘರ್ಷದ ಹೇಳಿಕೆಗಳ ಆಧಾರದ ಮೇಲೆ, ಇದು ಯೋಜಿತ ಕೊಲೆ ಎಂದು ತೀರ್ಮಾನಿಸಲಾಯಿತು ಮತ್ತು ಥಾರಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಯಿತು. ನಂತರ ಆಕೆಯ ಚಿಕ್ಕಪ್ಪ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಆಕೆಯ ತಂದೆಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)