ನವದೆಹಲಿ: ಇತ್ತೀಚಿನ ದಿನಗಳಲ್ಲಂತೂ ಯುವಜನತೆ ಮಾಡುವ ರೀಲ್ಸ್ಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತವೆ ಹಾಗೂ ನೆಟ್ಟಿಗರ ಗಮನವನ್ನು ಸೆಳೆಯುತ್ತದೆ. ಅದರಲ್ಲೂ ಯುವತಿಯರೇ ಈ ರೀಲ್ಸ್ ಗೀಳಿಗೆ ಹೆಚ್ಚಾಗಿ ಸಿಲುಕಿದ್ದು, ರೀಲ್ ವಿಡಿಯೋ ಮಾಡದಿದ್ದರೇ ದಿನವೇ ಅಪೂರ್ಣ ಎಂಬಂತೆ ಭಾವಿಸುತ್ತಾರೆ. ಸದ್ಯ ರೀಲ್ ಟ್ರೆಂಡ್ನಲ್ಲಿ ನಾನು ಇರಬೇಕು ಎಂದು ಈ ಮಹಿಳೆ ರಸ್ತೆಗಿಳಿದಿದ್ದೇ ತಡ, ಕಳ್ಳನಿಗೆ ಅದೃಷ್ಟದ ದಿನವಾಗಿದೆ.
ಹೌದು, ಮಹಿಳೆಯೊಬ್ಬರು ರೀಲ್ಸ್ ಮಾಡಲೆಂದು ರಸ್ತೆಯ ಮಧ್ಯೆ ನಿಂತು ನಿಧಾನವಾಗಿ ನಡೆದುಕೊಂಡು ಬರುತ್ತಿದ್ದರು. ಇದನ್ನು ದೂರದಿಂದಲೇ ಗಮನಿಸಿದ ಬೈಕ್ನಲ್ಲಿ ಬಂದ ಕಿರಾತಕ. ಮಹಿಳೆ ಮತ್ತು ಆಕೆಯ ಸ್ನೇಹಿತೆ ರೀಲ್ ಚಿತ್ರೀಕರಿಸುತ್ತಿದ್ದ ವೇಳೆ ಬೈಕ್ನಲ್ಲಿ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದು ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಘಟನೆ ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ವರದಿಯಾಗಿದ್ದು, ಮಹಿಳೆ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಸರಗಳ್ಳತನದ ಸಂಪೂರ್ಣ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಆಕೆ ಮುಂದೆ ಬರುತ್ತಿದ್ದಂತೆ ಸರ ಎಗರಿಸಿದ ಕಿರಾತಕ, ಹೆಲ್ಮೆಟ್ ಧರಿಸಿದ್ದರಿಂದ ಮುಖ ಸ್ಪಷ್ಟವಾಗಿ ಕಂಡುಬಂದಿಲ್ಲ. ಸಂತ್ರಸ್ತೆ ಸುಷ್ಮಾ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ,(ಏಜೆನ್ಸೀಸ್).