ನ್ಯೂಸ್

ಸಮುದ್ರ ತೀರದಲ್ಲಿ ಪ್ರೇಮಿಗಳ ಚೆಲ್ಲಾಟ..ಚುಂಬಿಸುತ್ತಿದ್ದಾಗಲೇ ನಡೆಯಿತು ಘೋರ ದುರಂತ!

ಮಾಸ್ಕೋ: ಪ್ರೇಮಿಗಳ ಹುಚ್ಚಾಟ, ಚೆಲ್ಲಾಟಕ್ಕೆ ಮಿತಿಯೇ ಇರುವುದಿಲ್ಲ. ಅಪಾಯವಿದ್ದರೂ ಪ್ರಾಣ ಪಣಕ್ಕಿಟ್ಟು ಬಾರದ ಲೋಕಕ್ಕೆ ಹೋಗಿರುವವರು ಅದೆಷ್ಟೋ..ಇಂತಹ ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇತ್ತೀಚಿಗೆ ಜೋಡಿಯೊಂದು ಸಮುದ್ರತೀರದಲ್ಲಿ ಮೋಜು ಮಾಡುತ್ತಿದ್ದಾಗ ಬೃಹತ್​ ಅಲೆ ಬಂದಿದ್ದು, ಯುವತಿ ನೀರುಪಾಲಾಗಿದ್ದಾಳೆ. ರಷ್ಯಾದಲ್ಲಿ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಸಮುದ್ರದ ದಡದಲ್ಲಿ ಅಲೆಗಳ ಮಧ್ಯೆ ಪ್ರೇಮಿಗಳು ಮೋಜು ಮಸ್ತಿಯಲ್ಲಿದ್ದಾಗ ಮನಕಲಕುವ ಘಟನೆಯೊಂದು ನಡೆಯುತ್ತದೆ. ಇಬ್ಬರೂ ದೊಡ್ಡ ಅಲೆಗಳು ಬರುತ್ತಿದ್ದರೂ ಅಲ್ಲಿಯೇ ನಿಂತು ಅಲೆಗಳನ್ನು ಆನಂದಿಸುತ್ತಾರೆ. ಯುವತಿ ಅಲೆಗಳ ನಡುವೆ ಯುವಕನನ್ನು ಮತ್ತಷ್ಟು ಒಳಗೆ ಎಳೆದೊಯ್ಯುತ್ತಾಳೆ. ಅವನು ಬೇಡ ಎನ್ನುತ್ತಾನೆ. ಆದರೆ ಆಕೆ ಅವನನ್ನು ಬಲವಂತವಾಗಿ ಒಳಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಇಬ್ಬರೂ ನಿಂತು ಚುಂಬಿಸುತ್ತಾರೆ. ಈ ವೇಳೆ ಅವರ ಮೇಲೆ ದೊಡ್ಡ ಅಲೆಯೊಂದು ಬಂದು ಬೀಳುತ್ತದೆ. ಪರಿಣಾಮವಾಗಿ, ಇಬ್ಬರೂ ಮತ್ತಷ್ಟು ಒಳಕ್ಕೆ ಮುಳುಗುತ್ತಾರೆ. ಆದರೆ ಯುವಕ ಹೇಗೋ ದಡ ಸೇರುತ್ತಾನೆ. ಯುವತಿ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿದ್ದಾಳೆ.

ಯುವಕ ತನ್ನ ಪ್ರಿಯತಮೆಯನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಆದರೆ ಆಕೆ ಆಗಲೇ ಸಮುದ್ರದ ಆಳಕ್ಕೆ ಹೋಗಿದ್ದ ಕಾರಣ ಅವನಿಗೆ ರಕ್ಷಿಸಲು ಸಾಧ್ಯವಾಗಲಿಲ್ಲ.

ಮಾಹಿತಿ ಪಡೆದ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಆಗಮಿಸಿ ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಎತ್ತರದ ಅಲೆಗಳ ಕಾರಣ, ಇದು ಅವರಿಗೂ ಸಾಧ್ಯವಾಗಿಲ್ಲ. ಸಮುದ್ರದಲ್ಲಿ ಕೊಚ್ಚಿ ಹೋದ ಯುವತಿಗಾಗಿ ಮೂರು ದಿನಗಳಿಂದ ಹುಡುಕಾಟ ನಡೆಸುತ್ತಿದ್ದಾರೆ.

ರಷ್ಯಾದ ಸೋಚಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಜೂನ್ 16 ರಂದು ಪ್ರೇಮಿಗಳು ಸ್ಥಳೀಯ ಸಮುದ್ರ ತೀರಕ್ಕೆ ಹೋಗಿದ್ದರು.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟಿಜನ್‌ಗಳು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. “ಅಯ್ಯೋ.. ಪಾಪ..! "ಎಂತಹ ಭಯಾನಕ ಘಟನೆ ಸಂಭವಿಸಿದೆ" ಎಂದು ಮರಗುತ್ತಿದ್ದಾರೆ.