ಅಗರ್ತಲಾ: ಬೇರೊಬ್ಬಳೊಡನೆ ಡೇಟಿಂಗ್ ಶುರುಮಾಡಿದ್ದ ಪತಿ. ಮದುವೆ ಆಗೋ ಅಂದ್ರೆ ಒಪ್ಪದ ಬಾಯ್ಫ್ರೆಂಡ್. ಹತಾಶಳಾದ ಪತ್ನಿ ಮಾಡಿದ್ದೇನು ಅಂದ್ರೆ, ಬಾಯ್ಫ್ರೆಂಡ್ ಮೇಲೆ ಆ್ಯಸಿಡ್ ದಾಳಿ! ಇದ್ಯಾವ ನಮೂನೆಯ ಪ್ರೇಮಕಥೆಯೋ ಗೊತ್ತಿಲ್ಲ. ಆ್ಯಸಿಡ್ ದಾಳಿ ನಡೆಸಿದ 27 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಮಂಗಳವಾರ ಸ್ಥಳೀಯ ಕೋರ್ಟ್ ಆಕೆಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಆ್ಯಸಿಡ್ ದಾಳಿ ಸಂತ್ರಸ್ತನ ಮುಖ ಸುಟ್ಟು ಹೋಗಿದ್ದು, ಕಣ್ಣು, ಮೂಗು ಶ್ವಾಸಕೋಶಕ್ಕೆ ಹಾನಿಯಾಗಿದೆ. ಆತನ ಸ್ಥಿತಿ ಗಂಭೀರವಾಗಿದ್ದು, ಅಗರ್ತಲಾ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನಡೆಯುತ್ತಿದೆ. ಆರೋಪಿ ಮಹಿಳೆಯನ್ನು ಬಿನತಾ ಸಂತಾಲ್ ಎಂದು ಗುರುತಿಸಲಾಗಿದೆ. ಆಕೆ ಪೊಲೀಸರಿಗೆ ಹೇಳಿದ್ದಿಷ್ಟು- ಸಂತ್ರಸ್ತನೊಂದಿಗೆ ಎಂಟು ವರ್ಷಗಳಿಂದ ಸಂಬಂಧವಿದೆ. ಶಾಲಾ ದಿನಗಳಿಂದಲೇ ಆತನನ್ನು ಬಲ್ಲೆ ನಾನು. ಆತ ಪದವಿ ಶಿಕ್ಷಣ ಪಡೆದ ನಂತರದಲ್ಲಿ ಮನೆಯವರೊಂದಿಗೆ ಪುಣೆಗೆ ಸ್ಥಳಾಂತರಗೊಂಡ. ಅಷ್ಟೇ ಅಲ್ಲ ಸಂಪರ್ಕ ಬಿಟ್ಟಿದ್ದ.
2018ರ ಮಾರ್ಚ್ ನಲ್ಲಿ ಮತ್ತೆ ತ್ರಿಪುರಾಕ್ಕೆ ಆಗಮಿಸಿದ್ದ. ಈ ನಡುವೆ ನಾನು ರಾಂಚಿಯಲ್ಲಿ ಆರೋಗ್ಯ ಸೇವಾ ಸಿಬ್ಬಂದಿಯಾಗಿ ಕೆಲಸ ಆರಂಭಿಸಿದ್ದೆ. ತ್ರಿಪುರಾಕ್ಕೆ ಬಂದು ಆತನ ಗ್ರಾಮಕ್ಕೆ ಭೇಟಿ ನೀಡಿದರೆ ಆತ ಅಲ್ಲಿರಲಿಲ್ಲ. ಮೊನ್ನೆ ದುರ್ಗಾ ಪೂಜೆ ಸಂದರ್ಭದಲ್ಲಿ ಕಾಣಸಿಕ್ಕಿದ್ದ. ಆತನಿಗೆ ಪ್ರೇಮ ನಿವೇದನೆ ಮಾಡಿ ವಿವಾಹವಾಗುವಂತೆ ಕೇಳಿದೆ. ಆತ ಒಪ್ಪಲಿಲ್ಲ. ಪ್ರತೀಕಾರದ ದ್ವೇಷ ಹುಟ್ಟಿ ಆ್ಯಸಿಡ್ ದಾಳಿ ನಡೆಸಿದೆ.
ಇದೀಗ, ಪ್ರಕರಣದ ವಿಸ್ತೃತ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. (ಏಜೆನ್ಸೀಸ್)