ಛತ್ತೀಸ್‌ಗಢ: ಮಾಜಿ ಪ್ರಿಯಕರ ಮತ್ತೊಬ್ಬ ಮಹಿಳೆಯನ್ನು ಮದುವೆಯಾಗುತ್ತಿರುವ ವಿಚಾರವಾಗಿ ಕೋಪಗೊಂಡ ಯುವತಿ ಆತನ ಮೇಲೆ ಆ್ಯಸಿಡ್ ಎರಚಿದ ಘಟನೆ ಬಸ್ತಾರ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಆ್ಯಸಿಡ್ ಎರಚಿದ ಆರೋಪದ ಮೇಲೆ 22 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.ತನಿಖೆಯ ವೇಳೆ ಅಪರಾಧದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಏಪ್ರಿಲ್ 19 ರಂದು ವರ ದಮರುಧರ್ ಬಘೇಲ್ ಯುವತಿಯನ್ನು ಭಾನ್‌ಪುರಿ ಪೊಲೀಸ್ ಠಾಣಾ ವ್ಯಾಪ್ತಿಯ ಛೋಟೆ ಅಮಾಬಲ್ ಗ್ರಾಮದಲ್ಲಿ ಮದುವೆಯಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆ್ಯಸಿಡ್ ದಾಳಿಯಲ್ಲಿ ವರ, ವಧು ಮತ್ತು 10 ಮಂದಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿವೆ.
ಗ್ರಾಮದಲ್ಲಿ ಅಳವಡಿಸಲಾಗಿರುವ ಕೆಲವು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ್ದೇವೆ. ಸಂಜೆಯ ವೇಳೆಗೆ ಈ ಘಟನೆ ನಡೆದಿದ್ದು, ಆ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಜನರು ಆರೋಪಿಗಳನ್ನು ನೋಡಲಾಗಲಿಲ್ಲ ಎಂದು ಹೇಳಿದ್ದಾರೆ. ತನಿಖೆಯಲ್ಲಿ ವರನ ಮಾಜಿ ಗೆಳತಿ ಮಹಿಳೆ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ನಂತರ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ತನಗೂ ದಮೃಧರ್ ಬಘೇಲ್‌ಗೂ ಕಳೆದ ಹಲವು ವರ್ಷಗಳಿಂದ ಸಂಬಂಧವಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದು, ದಮರುಧರ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿ ತನಗೆ ಮೋಸ ಮಾಡಿದ್ದಾನೆ ಎಂದು ದಾಳಿ ಮಾಡಲು ಯೋಜಿಸಿದ್ದೆ ಎಂದು ಯುವತಿ ಪೊಲೀಸರ ಎದುರು ಹೇಳಿದ್ದಾಳೆ.