ಲಖನೌ: ತನ್ನ ಪ್ರಿಯಕರ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದಕ್ಕೆ ಕೋಪಗೊಂಡ ಮಾಜಿ ಪ್ರಿಯತಮೆ ಮಲಗುವ ಕೋಣೆಗೆ ನುಗ್ಗಿ ನವ ವಧುವಿನ ಕತ್ತು ಕೊಯ್ದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ.
ವಾರಣಾಸಿಯ ಚೋಲಾಪುರ ಪ್ರದೇಶದಲ್ಲಿ ವಧು ತನ್ನ ಕೋಣೆಯಲ್ಲಿ ಮಲಗಿದ್ದಾಗ ಈ ಘಟನೆ ನಡೆದಿದೆ. ಭಗ್ನ ಪ್ರೇಮಿ ಪ್ರಿಯಾ ಶರ್ಮಾ, ವಧುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ನಂತರ ಕೋಣೆಯಲ್ಲಿ 'ಅವನು ನನ್ನವನಲ್ಲದಿದ್ದರೆ, ಬೇರೆಯವಳ ಜೊತೆ ಇರಲು ಬಿಡುವುದಿಲ್ಲ' ಎಂದು ಕೂಗಲು ಪ್ರಾರಂಭಿಸಿದ್ದಾಳೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ನವವಿವಾಹಿತೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಆಘಾತಕಾರಿ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಪ್ರಿಯಾ ಶರ್ಮಾ ಮತ್ತು ಬಬ್ಲು ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಬಹಿರಂಗಪಡಿಸಿದ್ದಾರೆ. ಹಲವಾರು ವರ್ಷಗಳಿಂದ ಮದುವೆಯ ನೆಪದಲ್ಲಿ ಬಬ್ಲು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪ್ರಿಯಾ ಹೇಳಿಕೊಂಡಿದ್ದಾಳೆ.ಆಕೆ ಮೇಲೆ ಕೊಲೆ ಯತ್ನದ ಆರೋಪ ಹೊರಿಸಲಾಗಿದ್ದು, ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾಳೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.