ಉತ್ತರಾಖಂಡ: ಕೇದಾರನಾಥ ದೇಗುಲದ ಗರ್ಭಗುಡಿಯೊಳಗಿನ ಶಿವಲಿಂಗದ ಮೇಲೆ ಮಹಿಳೆಯೊಬ್ಬರು ಕರೆನ್ಸಿ ನೋಟುಗಳನ್ನು ಎಸೆಯುತ್ತಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಉತ್ತರಾಖಂಡದ ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ, ಶಿವಲಿಂಗದ ಮೇಲೆ ಮಹಿಳೆಯೊಬ್ಬರು ನೋಟುಗಳನ್ನು ಸುರಿಯುತ್ತಿರುವುದು ಕಂಡುಬಂದಿದೆ. ಈ ಘಟನೆಯನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಲಾಗಿದ್ದು, ಇದೀಗ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ವೀಕ್ಷಕರಿಂದ ಅಸಮಾಧಾನ ವ್ಯಕ್ತವಾಗಿದೆ.
ಈ ಬಗ್ಗೆ ಅಗತ್ಯ ಹಾಗೂ ತಕ್ಷಣ ಕ್ರಮ ಕೈಗೊಳ್ಳುವಂತೆ ದೇವಸ್ಥಾನದ ಅಧಿಕಾರಿಗಳು ಪೊಲೀಸರನ್ನು ಆಗ್ರಹಿಸಿದ್ದಾರೆ. ಮಹಿಳೆಯ ಗುರುತು ಇನ್ನೂ ತಿಳಿದುಬಂದಿಲ್ಲ. ಶ್ರೀ ಬದರಿನಾಥ ಕೇದಾರನಾಥ ದೇವಾಲಯ ಸಮಿತಿಯು ಅಧ್ಯಕ್ಷ ಅಜೇಂದ್ರ ಅಜಯ್, ವೈರಲ್ ವಿಡಿಯೋವನ್ನು ಗಮನದಲ್ಲಿಟ್ಟುಕೊಂಡು ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.