ನ್ಯೂಸ್

"ನಿಮ್ಮ 2 ಸಾವಿರ ರೂ. ಬೇಡ, ಅಕ್ಕಿ-ಬೇಳೆ ಬೆಲೆ ಇಳಿಸಿ" ಎಂದು ಕಿಡಿ ಕಾರಿದ ಮಹಿಳೆ!

ಬೆಂಗಳೂರು: ಕರ್ನಾಟಕದಲ್ಲಿ ಬೆಲೆ ಏರಿಕೆಯ ಸುದ್ದಿಗಳು ಆಗಾಗ ಕಿವಿಗೆ ಬೀಳುತ್ತಿದ್ದು ಇದೀಗ ಸಚಿವರಿಗೆ ಆ ಬಿಸಿಯನ್ನು ಮಹಿಳೆಯೊಬ್ಬರು ತಟ್ಟಿಸಿದ್ದಾರೆ.

ದತ್ತಾತ್ರಯ ವಾರ್ಡ್​ನಲ್ಲಿ ಸಚಿವ ದಿನೇಶ್​ ಗುಂಡೂರಾವ್, ಕೃತಜ್ಞತೆ ಸಲ್ಲಿಸಲು ಪಾದಯಾತ್ರೆ ಮಾಡುತ್ತಿದ್ದ ವೇಳೆ ದಾರಿಯಲ್ಲಿದ್ದ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ 2 ಸಾವಿರ ರೂ. ಬೇಡ!

ಸಚಿವ ದಿನೇಶ್ ಗುಂಡೂರಾವ್​ ಜತೆ ವಾಗ್ವಾದಕ್ಕಿಳಿದ ಮಹಿಳೆ, "ನಮಗೆ ನಿಮ್ಮ 2000 ರೂಪಾಯಿ ಬೇಡ. ಅಕ್ಕಿ, ಬೇಳೆ ಕಾಳು ಬೆಲೆ ಏರಿಕೆ ಆಗಿದೆ, ಇದನ್ನ ಕಡಿಮೆ ಮಾಡಿ ಸಾಕು" ಎಂದಿದ್ದಾರೆ. ಈ ಸಂದರ್ಭದಲ್ಲಿ ಆ ಮಹಿಳೆ, "ಅಕ್ಕಿ, ಬೇಳೆ, ದವಸ ಧಾನ್ಯ ಬೆಲೆ ಏರಿಕೆಯಾಗಿದೆ. ನಮ್ಮಂಥ ಬಡವರು ಬದುಕೋದು ಹೇಗೆ? ಬೆಲೆ ಏರಿಕೆಯನ್ನು ಕಡಿಮೆ ಮಾಡಿ" ಎಂದು ಸಚಿವರಿಗೆ ಆಗ್ರಹಿಸಿದ್ದಾರೆ.

ಆ ಮಹಿಳೆ ಸಚಿವರಿಗೆ ಬಿಸಿ ಮುಟ್ಟಿಸಿದ್ದು ಹೀಗೆ: 

ಬೆಲೆ ಏರಿಕೆ ಮಾಡಿದ್ದು ಕೇಂದ್ರ ಎಂದ ಸಚಿವರು

ಇದಕ್ಕೆ ಉತ್ತರಿಸಿದ ಸಚಿವರು, ಬೆಲೆ ಏರಿಕೆ ಮಾಡಿರುವುದು ಕೇಂದ್ರ ಎಂದು ಹೇಳಿದ್ದಾರೆ. ಮಹಿಳೆಗೆ ಉತ್ತರಿಸಿದ ದಿನೇಶ್ ಗುಂಡೂರಾವ್, "ಕೇಂದ್ರ ಸರ್ಕಾರದವರು ಬೆಲೆ ಏರಿಕೆ ಮಾಡಿರೋದು. ಅದು ಮಾರ್ಕೆಟ್ ರೇಟ್, ಅದನ್ನು ಕಡಿಮೆ ಮಾಡಲು ಸಾಧ್ಯವಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.