ನ್ಯೂಸ್

ತನ್ನ ಮನೆಯ ಬಾಗಿಲ ಬಳಿಯ ಕಾರ್ಪೆಟ್​ ಅಡಿಯಲ್ಲಿತ್ತು ರಹಸ್ಯ ಕೋಣೆ: ಒಳಹೊಕ್ಕ ಮಹಿಳೆಗೆ ಕಾದಿತ್ತು ಶಾಕ್!

ತನ್ನದೇ ಮನೆಯ ಬಾಗಿಲ ಬಳಿಯ ಕಾರ್ಪೆಟ್​ ತೆಗೆದ ಮಹಿಳೆಗೆ ಭಾರಿ ಆಘಾತವೊಂದು ಎದುರಾದ ಸಂದರ್ಭದ ಟಿಕ್​ಟಾಕ್​ ವಿಡಿಯೋದಲ್ಲಿ ವೈರಲ್​ ಆಗಿದೆ. ಏಕೆಂದರೆ, ತನಗೇ ಗೊತ್ತಿಲ್ಲದೇ ತನ್ನ ಮನೆಯ ಬಾಗಿಲ ಬಳಿಯಿರುವ ಕಾರ್ಪೆಟ್​ ಕೆಳಗೆ ರಹಸ್ಯ ಕೋಣೆಯೊಂದನ್ನು ನೋಡಿ ಗಲಿಬಿಲಿಗೊಂಡಿದ್ದಾಳೆ.

ಇದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ಮಹಿಳೆ ಟಿಕ್​ಟಾಕ್​ ಜಾಲತಾಣ ವೇದಿಕೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಆ ಕ್ಷಣದ ಅನುಭವವನ್ನು ತೆರೆದಿಟ್ಟಿದ್ದಾಳೆ. ಬೂದು ಬಣ್ಣದ ಕಾರ್ಪೆಟ್​ ಎಳೆದಾಗ ಅದರಡಿಯ ನೆಲಹಾಸಿನಲ್ಲಿ ಬಾಗಿಲೊಂದು ಇರುವುದನ್ನು ಆಕೆ ಪತ್ತೆ ಹಚ್ಚಿದ್ದಾಳೆ. ಬಳಿಕ ಬಾಗಿಲನ್ನು ತೆರೆದಾಗ ಮರದ ಮೆಟ್ಟಿಲುಗಳನ್ನು ನೋಡಿದ್ದಾಗಿ ಮಹಿಳೆ ಬರೆದುಕೊಂಡಿದ್ದಾಳೆ.

ಕೆಲ ನೆಟ್ಟಿಗರು ರಹಸ್ಯ ಕೋಣೆಯ ಒಳಗೆ ಏನಿದೆ ಎಂದು ತೋರಿಸುವಂತೆ ಬೇಡಿಕೊಂಡಿದ್ದಾರೆ. ಆರಂಭದಲ್ಲಿ ಕೋಣೆಯ ಒಳಗೆ ಹೋಗಲು ಮಹಿಳೆ ಹೆದರಿದಳಂತೆ. ಅಲ್ಲದೆ, ಆಕೆಗೆ ಗುನುಗುವ ಶಬ್ದವು ಸಹ ಕೇಳಿಸಿತ್ತಂತೆ. ಹೀಗಾಗಿ ಏಕಾಂಗಿಯಾಗಿ ಅದರೊಳಗೆ ಇಳಿಯಲು ಭಯಪಟ್ಟಿದ್ದಾಗಿ ಹೇಳಿಕೊಂಡಿದ್ದಾಳೆ.

ಇನ್ನು ಅದೇ ದಿನ ಮಧ್ಯರಾತ್ರಿ ಮನೆಯ ಲೈಟ್ಸ್​ ಇದ್ದಕ್ಕಿದ್ದಂತೆ ಆನ್​ ಆಯಿತ್ತಂತೆ. ಕೊನೆಗೂ ಧೈರ್ಯ ಮಾಡಿ ಕೋಣೆಯೊಳಗೆ ಒಳಗೆ ನಿಧಾನವಾಗಿ ಮಹಿಳೆ ಇಳಿದಿದ್ದಾಳೆ. ಈ ವೇಳೆ ತನ್ನ ಕಾಲುಗಳು ಭಯದಿಂದ ನಡುಗುತ್ತಿತ್ತೆಂದು ಆಕೆ ಒಪ್ಪಿಕೊಂಡಿದ್ದಾಳೆ. ರಹಸ್ಯ ಕೋಣೆಯ ಒಳಗೆ ಕುರ್ಚಿ ಸೇರಿದಂತೆ ಕೆಲ ಮರದ ಪೀಠೋಪಕರಣಗಳು ಮತ್ತು ಬೆಡ್​ ಫ್ರೇಮ್​ ಇದ್ದುದಾಗಿ ತಿಳಿಸಿದ್ದಾರೆ.

ಇನ್ನು ಅಲ್ಲಿ ಲೈಟ್ಸ್​ ಸ್ವಿಚ್​ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ತೆವಳುವಂತಹ ಪ್ರದೇಶದಲ್ಲಿ ನೀರಿನ ಸಣ್ಣ ಟ್ಯಾಂಕ್​, ಕೆಲವು ತ್ಯಜಿಸಿದ ಪದಾರ್ಥಗಳು ಇತ್ತೆಂದು ಹೇಳಿಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ತಮ್ಮ ಕಮೆಂಟ್​ಗಳನ್ನು ಹರಿಬಿಟ್ಟಿದ್ದು, ನಿಜಕ್ಕೂ ಇದೊಂದು ಹಾರರ್​ ಸಿನಿಮಾ ರೀತಿಯಲ್ಲಿದೆ. ಪತ್ತೆಯಾದ ಕುರ್ಚಿಯು ದೆವ್ವದ ಕುರ್ಚಿಯೇ ಆಗಿರಬಹುದೆಂದು ಕಮೆಂಟಿಸಿದ್ದಾರೆ. ಸದ್ಯ ವಿಡಿಯೊ ಮಾತ್ರ ಸಿಕ್ಕಾಪಟ್ಟೆ ವೈರಲ್​​ ಆಗಿದೆ. ಆದರೆ, ವಿಡಿಯೋ ಎಲ್ಲಿಯದ್ದ ಎಂದು ತಿಳಿದುಬಂದಿಲ್ಲ. (ಏಜೆನ್ಸೀಸ್​)