ನ್ಯೂಸ್

ಮಹಿಳೆಯರೇ ಹುಷಾರು: 'ಶಕ್ತಿ' ಮೀರಿ ಪ್ರಯಾಣಿಸುವ ಮುನ್ನ ಎಚ್ಚರಿಕೆ ಇರಲಿ..

ಗದಗ: ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸುವ ಸಲುವಾಗಿ, ಕಾಂಗ್ರೆಸ್ ತನ್ನ ಐದು ಗ್ಯಾರಂಟಿಗಳ ಪೈಕಿ ಒಂದಾಗಿ ಜಾರಿಗೆ ತಂದಿರುವ 'ಶಕ್ತಿ' ಯೋಜನೆಗೆ ಚಾಲನೆ ಸಿಕ್ಕ ಬಳಿಕ ಹಲವಾರು ಅವಾಂತರಗಳು ನಡೆದಿವೆ. ಇದೀಗ ಅಂಥದ್ದೇ ಒಂದು ಶಕ್ತಿ ಮೀರಿದ ಪ್ರಯತ್ನದಲ್ಲಿ ಮಹಿಳೆಯೊಬ್ಬರ ಕಾಲು ಜಖಂಗೊಂಡಿದೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಈ ದುರ್ಘಟನೆ ನಡೆದಿದೆ. ಲಕ್ಷ್ಮೇಶ್ವರದಿಂದ ಯಲಬುರ್ಗಾ ಮಾರ್ಗವಾಗಿ ತೆರಳುತ್ತಿದ್ದ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಗಾಯಗೊಂಡಿದ್ದಾಳೆ. ಈಕೆ ಬಸ್​ ತುಂಬಿದ್ದರೂ ಅದರ ಫುಟ್​ಪಾತ್​ನಲ್ಲಿ ನಿಂತು ಪ್ರಯಾಣಿಸುತ್ತಿದ್ದಾಗ ಅವಘಡ ಸಂಭವಿಸಿದೆ.

ಮುಂಭಾಗದ ಪುಟ್​ಬೋರ್ಡ್​ನಲ್ಲಿದ್ದ ಈಕೆ ಚಲಿಸುತ್ತಿದ್ದ ಬಸ್​ನಿಂದ ಕೆಳಕ್ಕೆ ಬಿದ್ದಿದ್ದು, ಈಕೆಯ ಕಾಲಿನ ಮೇಲೆ ಬಸ್​ನ ಹಿಂಭಾಗ ಚಕ್ರ ಹಾದುಹೋಗಿದೆ. ಹೀಗಾಗಿ ಈಕೆಯ ಕಾಲಿಗೆ ಗಂಭೀರವಾದ ಗಾಯವಾಗಿದೆ. ಎರಡು ಮೂರು ದಿನಗಳ ಹಿಂದೆ ಸಂಭವಿಸಿರುವ ಈ ಈ ಘಟನೆಯ ಸಿಸಿಟಿವಿ ದೃಶ್ಯ ಇದೀಗ ವೈರಲ್ ಆಗಲಾರಂಭಿಸಿದೆ.