ಸಾಂದರ್ಭಿಕ ಚಿತ್ರ 
ನ್ಯೂಸ್

ಗಂಡ ಬಿಡುತ್ತಾನೆಂದು ಲೋಕವನ್ನೇ ಬಿಟ್ಟಳು! 5ನೇ ಮಹಡಿಯಿಂದ ಕೆಳಗೆ ಹಾರಿದ ಮಹಿಳೆ

ನವದೆಹಲಿ: ಗಂಡನಿಂದ ಬೇರೆಯಾಗುವ ಬಗೆಗಿನ ಕಳವಳದಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡು ಲೋಕವನ್ನೇ ತ್ಯಜಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ನಗರದ ಮುಖರ್ಜಿನಗರದ ನಿವಾಸಿಯಾದ 52 ವರ್ಷ ವಯಸ್ಸಿನ ನೇಹಾ ವರ್ಮಾ ಮೃತಪಟ್ಟ ಮಹಿಳೆ.

ನೇಹಾ ಮತ್ತು ಆಕೆಯ ಗಂಡ ಧರಂ ವರ್ಮ ನಿರಂಕಾರಿ ಕಾಲೋನಿಯ ಅಪಾರ್ಟ್​ಮೆಂಟಿನಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಪರಸ್ಪರರಿಂದ ಬೇರೆಯಾಗುವ ಪ್ರಯತ್ನದಲ್ಲಿದ್ದರು. ಅವರ ಮಗ ಮತ್ತು ಮಗಳು ಅಮೆರಿಕದಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.

ಮಂಗಳವಾರ(ಸೆ.21) ಸಂಜೆ ನೇಹಾ, ತಮ್ಮ ಪತಿ ಮನೆಗೆ ಬರುವ ಸಮಯಕ್ಕೆ ಸರಿಯಾಗಿ, ಅವರಿಗೆ ಐ ಲವ್​ ಯು ಎಂದು ಸಂದೇಶ ಕಳುಹಿಸಿ, ತಾವು ವಾಸಿಸುತ್ತಿದ್ದ ಅಪಾರ್ಟ್​ಮೆಂಟ್​ ಕಟ್ಟಡದ 5ನೇ ಮಹಡಿಯಿಂದ ಕೆಳಗೆ ಹಾರಿದರು. ಅವರನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆಕೆ ಅದಕ್ಕೂ ಮುಂಚೆಯೇ ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕೃತ್ಯವು ಅಪಾರ್ಟ್​ಮೆಂಟಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಸಿಸಿಟಿವಿ ಫೂಟೇಜ್​ ಮತ್ತು ಮಹಿಳೆಯ ಮೊಬೈಲ್​ ಫೋನ್​ಗಳ ವಿಶ್ಲೇಷಣೆ ನಡೆಸಿ ತನಿಖೆ ನಡೆಸುತ್ತಿದ್ದಾರೆ. ಮಹಿಳೆಯ ಮಕ್ಕಳು ದೆಹಲಿಗೆ ಬಂದ ನಂತರ ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎನ್ನಲಾಗಿದೆ. (ಏಜೆನ್ಸೀಸ್)