ಸಾಂದರ್ಭಿಕ ಚಿತ್ರ 
ನ್ಯೂಸ್

ಭೀಕರ ಅಗ್ನಿ ಅವಘಡ: ಇಬ್ಬರು ಮಕ್ಕಳು ಸೇರಿ ತಾಯಿಯೂ ಸುಟ್ಟುಕರಕಲು..

ರಾಂಬನ್: ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಹಿಳೆ ಮತ್ತು ಆಕೆಯ ಇಬ್ಬರು ಪುತ್ರಿಯರು ಸುಟ್ಟು ಕರಕಲಾದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬಿಂಗಾರಾ ಗ್ರಾಮದಲ್ಲಿ ನಡೆದಿದೆ.

ಘಟನೆಯಲ್ಲಿ ನಜ್ಮಾ ಬೇಗಂ ಮತ್ತು ಆಕೆಯ ಇಬ್ಬರು ಪುತ್ರಿಯರಾದ ಇಕ್ರಾ ಮತ್ತು ಅಸ್ಮಾ ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಪತಿ ಇಬ್ರಾಹಿಂ ಮತ್ತು ಮಿರ್ಜಾ ಬೇಗಂ ಗಾಯಗೊಂಡಿದ್ದಾರೆ. ಧೋಕ್‌ನಲ್ಲಿ ಮೂರು ತಾತ್ಕಾಲಿಕ ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜಾನುವಾರುಗಳನ್ನು ಮೇಯಿಸಲು, ಸ್ಥಳೀಯ ಜನರು ಧೋಕ್​ ಎಂದು ಕರೆಯಲ್ಪಡುವ ಪರ್ವತಗಳ ಮೇಲೆ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿ ಇಲ್ಲಿಯೇ ವಾಸಿಸುತ್ತಾರೆ.ಈ ಘಟನೆಯಲ್ಲಿ ಐದು ಗುಡಿಸಲುಗಳು ಧ್ವಂಸವಾಗಿದ್ದು, ಜೀವಹಾನಿಯ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ದುಃಖ ವ್ಯಕ್ತಪಡಿಸಿದ್ದಾರೆ.

ರಾಂಬನ್‌ನ ಬಿಂಗಾರಾ ಗ್ರಾಮದಲ್ಲಿ ನಡೆದ ಅಗ್ನಿ ದುರಂತದಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದರಿಂದ ತೀವ್ರ ದುಃಖವಾಗಿದೆ. ದುಃಖತಪ್ತ ಕುಟುಂಬಕ್ಕೆ ನನ್ನ ಹೃತ್ಪೂರ್ವಕ ಸಂತಾಪ ಮತ್ತು ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ. ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)