ನ್ಯೂಸ್

ಒಬ್ಬ ಮಗನ ಚಿಕಿತ್ಸೆಗಾಗಿ ಇನ್ನೊಬ್ಬ ಮಗನನ್ನು ಮಾರಲೆತ್ನಿಸಿದ ತಂದೆ; ಪತಿ ವಿರುದ್ಧ ಪತ್ನಿಯ ದೂರು

ತೆಲಂಗಾಣ: ಅನಾರೋಗ್ಯದ ಕಾರಣಕ್ಕಾಗಿ ಆಸ್ತಿ-ಮನೆ ಮಾರಾಟ ಮಾಡಿದವರಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಗನ ಚಿಕಿತ್ಸೆಗಾಗಿ ಇನ್ನೊಬ್ಬ ಮಗನನ್ನೇ ಮಾರಾಟ ಮಾಡಲು ಯತ್ನಿಸಿದ ಪ್ರಕರಣ ನಡೆದಿದೆ. ಆದರೆ ಈ ವಿಷಯ ಗೊತ್ತಾದ ಪತ್ನಿ, ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.

ತೆಲಂಗಾಣದ ವಾರಂಗಲ್​ನಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಇಲ್ಲಿನ ಕರೀಮಬಾದ್ ನಿವಾಸಿ ಮಸೂದ್ ಎಂಬಾತನೇ ಮಗನನ್ನು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿ. ಈತ ತನ್ನ ಕಿರಿಯ ಮಗನ ಚಿಕಿತ್ಸೆಗಾಗಿ ಅವನಿಗಿಂತ ಹಿರಿಯ ಅಂದರೆ 4 ವರ್ಷದ ಪುತ್ರನನ್ನು ಮಾರಾಟ ಮಾಡಲು ಮುಂದಾಗಿದ್ದ.

ಕಿರಿಯ ಮಗನನ್ನು ಇಲ್ಲಿನ ಎಂಜಿಎಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆ ಖರ್ಚನ್ನು ಭರಿಸಲಾಗದೆ ಚಿಂತಿತನಾಗಿದ್ದ. ಅದಕ್ಕಾಗಿ ತನ್ನ 4 ವರ್ಷದ ಪುತ್ರ ಅಯನ್​ ಎಂಬಾತನನ್ನು ಮಾರಾಟ ಮಾಡಲು ನಿರ್ಧರಿಸಿದ್ದ. ತಾನು ಪುತ್ರನನ್ನು ತನ್ನ ಸಹೋದರಿಯ ಮನೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ಪತ್ನಿ ಬಳಿ ಹೇಳಿ ಕರೆದೊಯ್ದಿದ್ದ.

ಆದರೆ ಈ ವಿಷಯ ಪತ್ನಿಗೆ ಗೊತ್ತಾಗಿ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತನ್ನ ಸಹೋದರನೊಂದಿಗೆ ಮತ್ತೆವಾಡಾ ಪೊಲೀಸ್ ಠಾಣೆಗೆ ತೆರಳಿ ಈ ಮಹಿಳೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. -ಏಜೆನ್ಸೀಸ್