ರೈಲಿನಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ ಆರ್‌ಪಿಎಸ್‌ಎಫ್ ಸಿಬ್ಬಂದಿ  
ನ್ಯೂಸ್

ಚಲಿಸುತ್ತಿದ್ದ ರೈಲಿನಡಿ ಬಿದ್ದ ಮಹಿಳೆ; ಹೀರೋನಂತೆ ಬಂದು ಜೀವ ಉಳಿಸಿದ RPSF ಸಿಬ್ಬಂದಿ! | Train Accident

ಪ್ರಯಾಗ್‌ರಾಜ್ ಜಂಕ್ಷನ್‌ನಲ್ಲಿ ಚಲಿಸುತ್ತಿದ್ದ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್‌ ರೈಲಿನಡಿ ಬಿದ್ದ ಮಹಿಳೆಯನ್ನು ಆರ್‌ಪಿಎಸ್‌ಎಫ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ.ಈ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.

Prayagraj Express Accident: ಚಲಿಸುತ್ತಿದ್ದ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್‌ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ರೈಲಿನಡಿ ಬಿದ್ದ ಮಹಿಳೆಯನ್ನು ಆರ್‌ಪಿಎಸ್‌ಎಫ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಂಕ್ಷನ್‌ನ ಪ್ಲಾಟ್‌ಫಾರ್ಮ್‌ ನಂಬರ್‌ 1ರಲ್ಲಿ ಈ ಘಟನೆ ನಡೆದಿದ್ದು, ರಕ್ಷಣಾ ಕಾರ್ಯಾಚರಣೆಯ ಸಿಸಿಟಿವಿ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ರೈಲು ನಿಲ್ದಾಣದಿಂದ ಹೊರಡುತ್ತಿದ್ದ ವೇಳೆ ಮಹಿಳೆ ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಪ್ಲಾಟ್‌ಫಾರ್ಮ್‌ಗೆ ಬಿದ್ದ ಅವರು ರೈಲಿನಡಿ ಸಿಲುಕಿಕೊಂಡಿದ್ದಾರೆ. ಇದನ್ನು ಗಮನಿಸಿದ ಆರ್‌ಪಿಎಸ್‌ಎಫ್ 2ನೇ ಬೆಟಾಲಿಯನ್‌ನ ಎಎಸ್‌ಐಮಹೇಶ್ ಕುಮಾರ್ ಹರಿತ್ವಾಲ್‌ ಹಾಗೂ ಕಾನ್‌ಸ್ಟೆಬಲ್‌ಗಳಾದ ಪ್ರವೇಶ್ ಕುಮಾರ್ ಮತ್ತು ಬಸಂತ್ ತಕ್ಷಣ ಕಾರ್ಯಾಚರಣೆಗೆ ಇಳಿದಿದ್ದಾರೆ.

ರೈಲಿನಡಿ ಸಿಲುಕಿದ್ದ ಮಹಿಳೆಯ ರಕ್ಷಣೆ

ಇನ್ನು, ಸಿಬ್ಬಂದಿ ಮೊದಲು ತುರ್ತು ಸರಪಳಿ ಎಳೆದು ರೈಲನ್ನು ನಿಲ್ಲಿಸಿ, ಬಳಿಕ ರೈಲಿನಡಿ ಸಿಲುಕಿದ್ದ ಮಹಿಳೆಯನ್ನು ಎಚ್ಚರಿಕೆಯಿಂದ ಹೊರಗೆಳೆದು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಸುಮಾರು ಐದು ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿದೆ.

ಸಿಸಿಟಿಯಲ್ಲಿ ರಕ್ಷಣಾ ಕಾರ್ಯಾಚರಣೆ ಸೆರೆ

ಪ್ರಯಾಗ್‌ರಾಜ್ ಜಂಕ್ಷನ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ರಕ್ಷಣಾ ಕಾರ್ಯಾಚರಣೆ ಸೆರೆಯಾಗಿದೆ. ಮಹಿಳೆಯನ್ನು ಅಪಾಯದಿಂದ ಪಾರು ಮಾಡಿದ ಆರ್‌ಪಿಎಸ್‌ಎಫ್ ಸಿಬ್ಬಂದಿಯ ಸಮಯಪ್ರಜ್ಞೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಆಪರೇಷನ್ ಜೀವನ್ ರಕ್ಷಾ’ ಅಡಿ ಈ ಕಾರ್ಯಾಚರಣೆ ನಡೆದಿದ್ದು, ರಕ್ಷಣೆ ಬಳಿಕ ಮಹಿಳೆ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: DUSU ಸೋಲು; ರಾಹುಲ್ ಗಾಂಧಿ ಮಹತ್ವದ ಸಭೆ, RSS ಎದುರಿಸಲು ಹೊಸ ಪ್ಲ್ಯಾನ್? | DUSU Election

ಚಲಿಸುತ್ತಿರುವ ರೈಲಿಗೆ ಹತ್ತುವುದು ಅಥವಾ ಇಳಿಯುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ. ರೈಲು ಸಂಪೂರ್ಣವಾಗಿ ನಿಂತ ಬಳಿಕವೇ ಹತ್ತುವುದು ಅಥವಾ ಇಳಿಯುವುದು ಸೇರಿದಂತೆ ಸುರಕ್ಷತಾ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ.(ಏಜೆನ್ಸೀಸ್)