ನ್ಯೂಸ್

ಬಿಸಿಬಿಸಿ ಟೀಗಾಗಿ ಅತ್ತೆ-ಸೊಸೆ ನಡುವೆ ಜಗಳ; ಪ್ರಾಣ ಕಳೆದುಕೊಂಡ ವೃದ್ಧೆ

ಚೆನ್ನೈ:  ಕುಟುಂಬ ಎಂದರೆ ಮನಸ್ತಾಪಗಳು ಸರ್ವೇಸಾಮಾನ್ಯ. ಅದರಲ್ಲೂ ಅತ್ತೆ- ಸೊಸೆ ಎಂದರೆ ಪ್ರೀತಿ, ಜಗಳ ಇರುತ್ತದೆ. ಆದರೆ ಇಲ್ಲೊಬ್ಬಳು ಸೊಸೆ ಬಿಸಿ ಟೀ ತಂದುಕೊಡದ್ದಕ್ಕೆ ಗದರಿದ ಅತ್ತೆಯನ್ನೇ ರಾಡ್‍ನಿಂದ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ಚೆನ್ನೈನಲ್ಲಿ ನಡೆದಿದೆ.

ಪಳನಿಯಮ್ಮಾಳ್ ಮೃತ ಮಹಿಳೆ. ಇವರು ತಮಿಳುನಾಡಿನ ಪುದುಕೋಟೆ ಜಿಲ್ಲೆಯವರು. ಕನಕು ಕೊಲೆ ಮಾಡಿದ ಆರೋಪಿ. ಬಿಸಿಬಿಸಿ ಟೀ ಕೇಳಿದ ಅತ್ತೆಯನ್ನು ಸೊಸೆ ಕೊಲೆ ಮಾಡಿದ್ದಾಳೆ.

ಪಳನಿಯಮ್ಮಾಳ್‍ ಬಿಸಿಬಿಸಿ ಟೀ ತರಲು ಸೊಸೆಯನ್ನು ಅಂಗಡಿಗೆ ಕಳುಹಿಸಿದ್ದಳು. ಆದರೆ ಸೊಸೆ ಬಿಸಿ ಟೀ ತಂದಿಲ್ಲ ಎಂದು ಅತ್ತೆ ಗದರಿಸಿದ್ದಾಳೆ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಕೋಪಗೊಂಡ ಸೊಸೆ ಕನಕು ಸೈಕಲ್ ರಿಪೇರಿಗೆ ಬಳಸುವ ಕಬ್ಬಿಣದ ರಾಡ್‍ನಿಂದ ಪಳನಿಯಮ್ಮಾಳ್ ತಲೆಗೆ ಜೋರಾಗಿ ಹೊಡೆದಿದ್ದಾಳೆ.

ಗಂಭೀರವಾಗಿ ಗಾಯಗೊಂಡಿದ್ದ ಅತ್ತೆ ಪಳನಿಯಮ್ಮಾಳ್‍ಳನ್ನು ನೆರೆಹೊರೆಯವರು ಸೇರಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ದಾಖಲಿಸಿದ್ದಾಗ, ಅಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಬಳಿಕ ಕನಕು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ

ಮಾನಸಿಕ ಅಸ್ವಸ್ಥೆಯಾಗಿರುವ ಕನಕುಗೆ ಪ್ರತಿನಿತ್ಯ ಔಷಧಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಆಕೆ ಮಾತ್ರೆ ತೆಗದುಕೊಂಡಿರಲಿಲ್ಲ. ಹೀಗಾಗಿ ಅತ್ತೆ ಗದರಿದ್ದಕ್ಕೆ ಸಿಟ್ಟು ಬಂದು ಅತ್ತೆಯನ್ನು ಹೊಡೆದು ಕೊಂದಿದ್ದಾಳೆ ಎನ್ನಲಾಗಿದೆ.