ಉತ್ತರಪ್ರದೇಶ: ಮಹಿಳೆಯೊಬ್ಬರು ತನ್ನ ಅಸ್ವಸ್ಥ ಸಹೋದರನ ಜೀವ ಉಳಿಸಲು ಕಿಡ್ನಿ ದಾನ ಮಾಡಿದ ವಿಷಯ ತಿಳಿದ ಆಕೆಯ ಪತಿ, ಮಹಿಳೆಗೆ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ ಘಟನೆ ಉತ್ತರಪ್ರದೇಶದ ಗೊಂಡಾದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಹೆತ್ತ ತಾಯಿಗಾಗಿ 10 ವರ್ಷಗಳಿಂದ ಹುಡುಕಾಟ: ಸ್ವಿಟ್ಜರ್ಲೆಂಡ್ನಿಂದ ಮುಂಬೈಗೆ ಬಂದ ಯುವತಿಗೆ ಗಂಡನ ಸಾಥ್!
ಸಂತ್ರಸ್ತ ಮಹಿಳೆ ತರನ್ನುಮ್ ಅವರ ಪತಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಹೆಂಡತಿ ಸಹೋದರನಿಗೆ ಕಿಡ್ನಿ ದಾನ ಮಾಡಿದ ಸಂಗತಿ ತಿಳಿದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಪತ್ನಿಯ ಜತೆ ಜಗಳವಾಡಿದ ಪತಿ ಮೊಹಮ್ಮದ್ ರಶೀದ್, ಈ ವಿಚಾರವಾಗಿ ಮಹಿಳೆಯೊಂದಿಗೆ ಪದೇ ಪದೇ ಜಟಾಪಟಿ ನಡೆಸಿದ್ದಾನೆ.
ತನ್ನ ಹೆಂಡತಿ ಆಕೆಯ ಸಹೋದರನಿಗೆ ಕಿಡ್ನಿ ದಾನ ಮಾಡಿದ್ದೇನೆ ಎಂದು ಹೇಳಿದ್ದಕ್ಕೆ ಸಿಡಿಮಿಡಿಗೊಂಡ ಪತಿ ರಶೀದ್, ಜಗಳವಾಡಿದ್ದಲ್ಲದೇ ತರನ್ನುಮ್ ಬಳಿ 40 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದ. ಇದ್ದಕ್ಕೆ ಮಹಿಳೆ ಸುತಾರಾಮ್ ನಿರಾಕರಿಸಿದ್ದಾರೆ. ಪತ್ನಿಯ ನಿರಾಕರಣೆ ಖಂಡಿಸಿದ ಪತಿ, ಆಕೆಗೆ ಆಗಸ್ಟ್ 30 ರಂದು ವಾಟ್ಸಾಪ್ ಮುಖೇನ ತ್ರಿವಳಿ ತಲಾಖ್ ಸಂದೇಶವನ್ನು ಕಳುಹಿಸಿದ್ದಾನೆ.
ಈ ಘಟನೆಯ ಬೆನ್ನಲ್ಲೇ ತರನ್ನುಮ್ ತನ್ನ ತವರು ಮನೆಯಲ್ಲಿ ವಾಸವಿದ್ದರು. ಇದೀಗ ಪತಿ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).