ಯಾದಗಿರಿ: ಕೋವಿಡ್ ಆಸ್ಪತ್ರೆ ಎದುರಲ್ಲೇ ಮಹಿಳೆಯೊಬ್ಬರು ಒದ್ದಾಡಿ ಪ್ರಾಣಬಿಟ್ಟ ಅಮಾನವೀಯ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಶಹಾಪುರ ತಾಲೂಕಿನ ಸಗರ ಗ್ರಾಮದ 48 ವರ್ಷದ ಮಹಿಳೆ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಂಗಳವಾರ ಶಹಾಪುರ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೆಂಟಿಲೇಟರ್ ವ್ಯವಸ್ಥೆ ಇಲ್ಲದ ಕಾರಣ ಬುಧವಾರ ಆಂಬುಲೆನ್ಸ್ ಮೂಲಕ ಯಾದಗಿರಿಯ ಮುದ್ನಾಳ ತಾಂಡಾ ಸಮೀಪದಲ್ಲಿನ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿತ್ತು. ಸಕಾಲಕ್ಕೆ ಆಸ್ಪತ್ರೆಯಲ್ಲಿ ವೈದ್ಯರು ಸಿಗದ ಹಿನ್ನೆಲೆಯಲ್ಲಿ ಮಹಿಳೆ ಆಂಬುಲೆನ್ಸ್ನಲ್ಲೇ ನರಳಾಡಿ ಪ್ರಾಣಬಿಟ್ಟರು.
ಆಂಬುಲೆನ್ಸ್ನಲ್ಲಿ ಉಸಿರಾಟದ ಸಮಸ್ಯೆಯಿಂದ ಪ್ರಾಣ ಬಿಟ್ಟಿದ್ದಾಳೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ನಂತರ ಮಹಿಳೆಯ ಸ್ವಾಬ್ ಟೆಸ್ಟ್ ಮಾಡಿದ್ದು, ಕರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿದು ಬಂದಿದೆ.