ಅಹಮದಾಬಾದ್: ಕರೊನಾ ಸೋಂಕು ಕಡಿಮೆಯಾಗಿದೆಯಾದರೂ ಸಂಪೂರ್ಣವಾಗಿ ಹೋಗಿಲ್ಲ. ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಮಾತ್ರವೇ ಸೋಂಕು ನಿಯಂತ್ರಣ ಸಾಧ್ಯವಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ ಎಂದು ಸರ್ಕಾರ ಸಾಕಷ್ಟು ಮನವಿ ಮಾಡಿದೆ. ಆದರೂ ಕೇಳದ ಕೆಲವೊಬ್ಬರು ಅಧಿಕಾರಿಗಳ ಮೇಲೇ ರೇಗಾಡುತ್ತಾರೆ. ನಿವೃತ್ತ ಮಹಿಳಾ ಅಧಿಕಾರಿಯೊಬ್ಬರಿಗೆ ಮಾಸ್ಕ್ ಹಾಕಿಕೊಳ್ಳುವಂತೆ ಹೇಳಿದ್ದಕ್ಕೆ, ಆಕೆ ಪೊಲೀಸರಿಗೇ ಹಲ್ಲೆ ಬೆದರಿಕೆ ಹಾಕಿರುವ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ.
ನಿವೃತ್ತ ಸೇಲ್ಸ್ ಟ್ಯಾಕ್ಸ್ ಆಫೀಸರ್ ಆಗಿರುವ ರೀತಾ ಪಟೇಲ್(68) ಅವರು ತನ್ನ ಮಗ ಮತ್ತು ಸೊಸೆಯೊಂದಿಗೆ ಕಾರಿನಲ್ಲಿ ಅಹಮದಾಬಾದ್ನ ನಿರ್ಮಾ ವಿಶ್ವವಿದ್ಯಾಲಯದ ಬಳಿ ಬರುತ್ತಿದ್ದರು. ಈ ವೇಳೆ ಮಗ ಸೊಸೆ ಮಾಸ್ಕ್ ಹಾಕಿದ್ದರಾದರೂ ರೀತಾ ಅವರು ಹಾಕಿರಲಿಲ್ಲ. ಹೀಗಾಗಿ ಪೊಲೀಸರು ಗಾಡಿ ನಿಲ್ಲಿಸಿದ್ದು, ಮಾಸ್ಕ್ ಹಾಕಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ ಅಷ್ಟಕ್ಕೇ ಸಿಟ್ಟಿಗೆದ್ದ ರೀತಾ, ನಾನು ಮಾಸ್ಕ್ ಹಾಕಿಕೊಳ್ಳುವುದಿಲ್ಲ. ಹೆಚ್ಚಿಗೆ ಮಾತನಾಡಿದರೆ ನಿಮ್ಮ ಕೆನ್ನೆ ಮೇಲೆ ಏಟು ಕೊಡಬೇಕಾಗುತ್ತದೆ ಎಂದು ಧಮಕಿ ಹಾಕಿದ್ದಾರೆ.
ಈ ವಿಚಾರವಾಗಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಲಾಕ್ಡೌನ್ ನಿಯಮ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ರೀತಾ ಮತ್ತು ಅವರ ಮಗ ಪಾರಿತೋಷ್ ಮೇಲೆ ಪೊಲೀಸ್ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)