ನ್ಯೂಸ್

ನವಿಲು ಮಾರಣಾಂತಿಕ ದಾಳಿ ಮಾಡುತ್ತಿದೆ ಎಂದು ಆರೋಪ ಮಾಡಿದ ಮಹಿಳೆ!

ರಾಮನಗರ: ದಿನವೂ ಈ ಮಹಿಳೆಯ ಮೇಲೆ ಮನೆಯ ಬಳಿಯೇ ನವಿಲೊಂದು ದಾಳಿ ಮಾಡುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತು ಅವರು ಅರಣ್ಯ ಅಧಿಕಾರಿಗಳಿಗೆ ನವಿಲು ನಿತ್ಯವೂ ಹಲ್ಲೆ ಮಾಡಿ ಮಾರಣಾಂತಿಕ ಗಾಯ ಮಾಡಿದೆ ಎಂದು ದೂರು ನೀಡಿದ್ದಾರೆ.

ಈ ಅಪರೂಪದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದ್ದು ಲಿಂಗಮ್ಮ ಎನ್ನುವವರ ಮೇಲೆ ನವಿಲು ದಾಳಿ ಮಾಡಿದೆ ಎನ್ನಲಾಗಿದೆ. ಈ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದಲ್ಲಿ ನಡೆದಿದೆ.

ನವಿಲು ದಾಳಿಗೆ ಒಳಗಾದ ಲಿಂಗಮ್ಮ ಹಣೆ ಹಾಗೂ ತಲೆಗೆ ಗಾಯವಾಗಿದೆ. ದಾಳಿ ಮಾಡಿರುವ ನವಿಲು ಕಳೆದ ನಾಲ್ಕೈದು ದಿನಗಳಿಂದ ಮನೆಯ ಹಿಂಭಾಗದಲ್ಲಿ ವಾಸವಿದೆ ಎನ್ನಲಾಗಿದ್ದು ಹಿತ್ತಲಿನಲ್ಲಿ ಕೆಲಸ ಮಾಡುತ್ತಿರುವಾಗ ಏಕಾಏಕಿ ದಾಳಿ ಮಾಡುತ್ತಿದೆ.

ಸದ್ಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಲಿಂಗಮ್ಮ ಚನ್ನಪಟ್ಟಣ ಅರಣ್ಯ ಇಲಾಖೆಗೆ ನವಿಲಿನ ಮಾರಣಾಂತಿಕ ದಾಳಿ ಬಗ್ಗೆ ದೂರು ನೀಡಿದ್ದಾರೆ. ಲಿಂಗಮ್ಮ ಗ್ರಾಮಸ್ಥರ ಜತೆ ಒಗ್ಗೂಡಿ ಅರಣ್ಯ ಇಲಾಖೆಗೆ ದೂರು ನೀಡಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.