ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆಯಲ್ಲಿ ಸರ್ವಾನá-ಮತದಿಂದ ಅಂಗೀಕಾರವಾದರೂ, ಈ ಮಸೂದೆ ಕುರಿತ ಚರ್ಚೆಯ ವೇಳೆ ಪ್ರತಿಪಕ್ಷ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಿಳಾ ಮೀಸಲಾತಿ ಮಸೂದೆ ತರುವುದಾಗಿ ಬಿಜೆಪಿ 2014 ಮತ್ತು 2019ರಲ್ಲಿ ಆಶ್ವಾಸನೆ ನೀಡಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಮಸೂದೆಯನ್ನು ಬೆಂಬಲಿಸಿದ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ (ಸಿಪಿಐ-ಎಂ) ಏಳಮರಂ ಕರೀಂ ಹೇಳಿದರು. ಮಹಿಳೆಯರು ಒಂಬತ್ತು ವರ್ಷ ಕಾಲ ಮೀಸಲಾತಿ ಕಳೆದುಕೊಳ್ಳಲು ಆಳುವ ಪಕ್ಷವೇ ಹೊಣೆ ಎಂದು ಹೇಳಿದರು. ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಅಸೆಂಬ್ಲಿ ಚುನಾವಣೆಗಳು ಹಾಗೂ ದೆಹಲಿ ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿ ಸೋತ ಹಿನ್ನೆಲೆಯಲ್ಲಿ ಇದೊಂದು ರಾಜಕೀಯ ಗಿಮಿಕ್ ಆಗಿದೆ ಎಂದು ಕರೀಂ ಟೀಕಿಸಿದರು.
ನಾರಿ ಶಕ್ತಿ ವಂದನ್ ಅಧಿನಿಯಮ್ ಮಸೂದೆಯನ್ನು ತಂದ ಸಮಯವನ್ನು ಜೆಡಿಯು ಸದಸ್ಯ ರಾಮ ನಾಥ್ ಠಾಕೂರ್ ಪ್ರಶ್ನಿಸಿದರು. 2011ರ ಜನಗಣತಿಯನ್ನು ಮಹಿಳಾ ಮೀಸಲಾತಿಗೆ ಮಾನದಂಡವಾಗಿ ಪರಿಗಣಿಸಬಹುದು ಎಂದು ಭಾರತ್ ರಾಷ್ಟ್ರ ಸಮಿತಿಯ ಕೆ. ಕೇಶವ ರಾವ್ ಪ್ರತಿಪಾದಿಸಿದರು. ಮಸೂದೆ ಮಂಡನೆಯ ಸಮಯ ಹಾಗೂ ಉದ್ದೇಶವನ್ನು ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದು ಬಿಜೆಪಿ ಎಂಪಿ ಸರೋಜ್ ಪಾಂಡೆ ಹೇಳಿದರು.
ಗಡಿ ವಿಚಾರದಲ್ಲಿ ಭಾರತ ಮತ್ತು ಚೀನಾ ಮಿಲಿಟರಿಗಳ ವಿವಾದವನ್ನು ರ್ಚಚಿಸುವ ಧೈರ್ಯ ತಮಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಲೋಕಸಭೆಯಲ್ಲಿ ಘೋಷಿಸಿದರು. ಚಂದ್ರಯಾನ-3 ಮಿಷನ್ ಯಶಸ್ಸಿನ ಕುರಿತ ಚರ್ಚೆಯನ್ನು ಆರಂಭಿಸಿ ಮಾತನಾಡಿದ ಸಿಂಗ್,
ದೇಶದ ಗಡಿ ರಕ್ಷಣೆಯಲ್ಲಿ ವಿಜ್ಞಾನದ ಪಾತ್ರವನ್ನು ಉಲ್ಲೇಖಿಸಿದರು. ಈ ಹಂತದಲ್ಲಿ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಚೀನಾದೊಂದಿಗಿನ ಗಡಿ ಬಿಕ್ಕಟ್ಟನ್ನು ಗಮನಕ್ಕೆ ತಂದರು.
ಮಹಿಳಾ ಮೀಸಲಾತಿಯೊಳಗೆ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಕೋಟಾ ಒದಗಿಸಬೇಕೆಂಬ ಕಾಂಗ್ರೆಸ್ ಬೇಡಿಕೆಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಸಭೆಯಲ್ಲಿ ಕಟುವಾಗಿ ಟೀಕಿಸಿದರು. ದೇಶಕ್ಕೆ ಮೊದಲ ಒಬಿಸಿ ಪ್ರಧಾನಿಯನ್ನು ಕೊಟ್ಟಿದ್ದು ಬಿಜೆಪಿ ನೇತೃತ್ವದ ಎನ್ಡಿಎ ಎಂದು ಹೇಳಿದರು.
ಪ್ರತಿಪಕ್ಷಗಳು ‘ಇಸ್ರೋ ಭಜನೆ’ ಬದಲು ‘ನೆಹರೂ ಭಜನೆ’ಯಲ್ಲಿ ತೊಡಗಿವೆ ಎಂದು ಗುರುವಾರ ಲೋಕಸಭೆಯಲ್ಲಿ ಬಿಜೆಪಿ ಸದಸ್ಯ ತೇಜಸ್ವಿ ಸೂರ್ಯ ಟೀಕಾ ಪ್ರಹಾರ ಮಾಡಿದರು. ದೇಶದ ಬಹುತೇಕ ವೈಜ್ಞಾನಿಕ ಸಂಸ್ಥೆಗಳನ್ನು ಸ್ವಾತಂತ್ರ್ಯ-ಪೂರ್ವ ಕಾಲದಲ್ಲೇ ಆರಂಭಿಸಲಾಗಿತ್ತೆನ್ನುವುದು ವಾಸ್ತವಿಕ ಸಂಗತಿ. ಅದರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂರ ಪಾತ್ರ ಏನೂ ಇಲ್ಲ ಎಂದು ಚಂದ್ರಯಾನ-3 ಮಿಷನ್ ಯಶಸ್ಸಿನ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದ ಸೂರ್ಯ ಹೇಳಿದರು.