More

    ಸೌಭಾಗ್ಯದಾತೆ ಜ್ಯೇಷ್ಠಾಗೌರಿ ಅರ್ಥಾತ್ ಎಳೆಯಷ್ಟಮಿ ಆಚರಣೆ ಹೇಗೆ?

    ಪುಷ್ಪಾ ಮೋಹನ ಮುದಕವಿ
    ಬೆಂಗಳೂರು:
    ಭಾದ್ರಪದ ಶುಕ್ಲ ಸಪ್ತಮಿ, ಅಷ್ಟಮಿ, ನವಮಿ – ಅಂದರೆ ಸೆ. 21, 22, 23ರಂದು ಜ್ಯೇಷ್ಠಾ ಗೌರಿ ಪೂಜೆಯ ಆಚರಣೆ ಇದೆ. ಉತ್ತರ ಕರ್ನಾಟಕ, ಮಹಾರಾಷ್ಟ್ರ ಭಾಗಗಳಲ್ಲಿ ಇದನ್ನು ಎಳೆಯಷ್ಟಮಿ ಎಂಬ ಹೆಸರಿನಿಂದ ಆಚರಿಸುತ್ತಾರೆ. ಪೂಜೆ, ಗೌರೀ ಊಟ, ದೋರಬಂಧನ ಹೀಗೆ ವಿವಿಧ ಧಾರ್ಮಿಕ ಸಂಪ್ರದಾಯಗಳಿರುತ್ತವೆ. ಸಂಭ್ರಮೋತ್ಸಾಹಗಳಿಂದ ಇದನ್ನು ಆಚರಿಸುವ ಸಂಪ್ರದಾಯವಿದೆ.

    ಹಿಂದೂ ಪರಂಪರೆಯಲ್ಲಿ ಲಕ್ಷ್ಮೀ ಪಾರ್ವತಿಯರು ವಿಧ ವಿಧ ಗೌರೀ ರೂಪದಲ್ಲಿ ಸುವಾಸಿನಿಯರ ಆರಾಧನೆಗೆ ಪಾತ್ರರಾಗಿ ಸೌಭಾಗ್ಯದಾತೆಯರೆಂಬ ಅಭಿದಾನದಿಂದ ಕಂಗೊಳಿಸುತ್ತಿದ್ದಾರೆ. ಚೈತ್ರ ಗೌರಿ, ದಿವಸೀ ಗೌರಿ, ಶ್ರಾವಣ ಸಂಪತ್ತು ಶುಕ್ರವಾರ ಶನಿವಾರದ ಗೌರಿ, ಸ್ವರ್ಣ ಗೌರಿ, ಹರತಾಳಿಕಾ ಗೌರಿ, ಜ್ಯೇಷ್ಠಾ ಗೌರಿ ಹೀಗೆ ಹಲವು ಹೆಸರುಗಳಿಂದ ಆರಾಧಿಸಲ್ಪಡುತ್ತಾರೆ. ಮದುವೆಯ ಸಂದರ್ಭದಲ್ಲಂತೂ ಧಾರೆಗೆ ಮೊದಲು ವಧು ತನ್ನ ವೈವಾಹಿಕ ಜೀವನ ಹಾಗೂ ಮಾಂಗಲ್ಯ ಭಾಗ್ಯಕ್ಕಾಗಿ ಮೌನವ್ರತದಿಂದ ದೇವಿಯನ್ನು ಭಕ್ತಿಯಿಂದ ಆರಾಧಿಸುತ್ತಾಳೆ. ಹೀಗೆ ಗೌರಿ ಪೂಜೆಯ ಹಿರಿಮೆ ಹೆಚ್ಚುತ್ತಲೇ ಸಾಗಿದೆ. ಇಲ್ಲಿ ಈಗ ಭಾದ್ರಪದ ಶುಕ್ಲ ಅಷ್ಟಮಿಯಂದು ಪೂಜಿಸಲ್ಪಡುವ ಜ್ಯೇಷ್ಠಾದೇವಿಯ ವ್ರತದ ಕುರಿತಾಗಿ ತಿಳಿದುಕೊಳ್ಳೋಣ.

    ಭವಿಷೋತ್ತರ ಪುರಾಣದಲ್ಲಿ ಜ್ಯೇಷ್ಠಾದೇವಿಯ ವ್ರತದ ಉಲ್ಲೇಖವಿದೆ. ಗುಣಾದಿಗಳಿಂದ ಜ್ಯೇಷ್ಠಳಾಗಿರುವ ಲಕ್ಷ್ಮೀದೇವಿಯ ಉಪಾಸನೆಯೇ ಈ ವ್ರತದ ಉದ್ದೇಶ. ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಹಲವಾರು ಭಾಗಗಳಲ್ಲಿ ಭಾದ್ರಪದ ಮಾಸದ ಶುಕ್ಲಪಕ್ಷ ಅಷ್ಟಮಿ ತಿಥಿಯಂದು ಜ್ಯೇಷ್ಠಾನಕ್ಷತ್ರದಲ್ಲಿ ಆಚರಿಸುವ ಈ ವ್ರತವನ್ನು ಜ್ಯೇಷ್ಠಾ ಗೌರಿ,ಅಷ್ಟಮಿ ಗೌರಿ ಅಥವಾ ಎಳೆ ಅಷ್ಟಮಿ ಎಂಬುದಾಗಿಯೂ ಹೇಳುವುದುಂಟು.

    ಭಾದ್ರೇ ಶುಕ್ಲಾಷ್ಟಮೀ ಜ್ಯೇಷ್ಠಾ ನಕ್ಷತ್ರೇಣ ಸಮನ್ವಿತಾ
    ಮಹತಿ ಕೀರ್ತಿತಾ ತಸ್ಯಾಂ ಜ್ಯೇಷ್ಠಾದೇವಿಂ ಪ್ರಪೂಜಯೇತ್
    ಕಲಶದಲ್ಲಿ ಗೌರಿಯನ್ನು ಆವಾಹಿಸಿ ಸ್ತ್ರೀ ಸೂಕ್ತ ಪಠಣದೊಂದಿಗೆ ಷೋಡಶೋಪಚಾರಗಳಿಂದ ಅರ್ಚಿಸುವರು. ಷೋಡಶೋಪಚಾರವೆಂದರೆ ಧ್ಯಾನ ಆವಾಹನ, ಆಸನ, ಪಾದ್ಯ, ಅರ್ಘ್ಯ, ಆಚಮನ, ಮಧುಪರ್ಕ, ಅಭಿಷೇಕ, ವಸ್ತ್ರ, ಆಭರಣ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ಆರತಿ(ಕಡಲೆ ಹೂರಣದ ಆರತಿ) ಇವುಗಳಿಂದ ಪೂಜಿಸಬೇಕು.

    ಸಾಂಪ್ರದಾಯಿಕ ಆಚರಣೆ: ಮಣ್ಣಿನ ಹೊಸ ಗಡಿಗೆಯನ್ನು ತಂದು ಅದರ ಮೇಲೆ ಗೌರಿಯನ್ನು ಬರೆದು, ಅಂದರೆ ಶಂಖ, ಚಕ್ರ, ಅಷ್ಟ ದಳ, ಪದ್ಮ, ಹಸು, ಆನೆ, ತುಳಸಿ ವೃಂದಾವನ ಮುಂತಾದ ಚಿತ್ರಗಳನ್ನು ಸುಣ್ಣ ಹಾಗೂ ಕೆಮ್ಮಣ್ಣುಗಳಿಂದ ಬರೆದು, ಗಡಿಗೆಯ ಮೇಲೆ ಸುಂದರ ಗೌರಿ ಮುಖವನ್ನೂ ಚಿತ್ರಿಸಬೇಕು. ಅದರೊಳಗೆ ಅರಿಷಿಣ, ಕುಂಕುಮ, ಅಕ್ಕಿ, ಮಕ್ಕಳ ಬೇರು; ಐದು ತರಹದ ಫಲಗಳನ್ನು (ಉತ್ತತ್ತಿ, ಒಣ ದ್ರಾಕ್ಷಿ, ಒಣಕೊಬ್ಬರಿ ಚೂರುಗಳು, ಅಡಿಕೆ, ಬದಾಮು) ತುಂಬಿ ಜತೆಗೊಂದು ಬೆಳ್ಳಿಯ ಅಥವಾ ಬಂಗಾರದ ಲಕ್ಷೀ ನಾಣ್ಯವನ್ನು ಹಾಕಿ ಗೆಜ್ಜೆ ವಸ್ತ್ರ, ಮಂಗಳಸೂತ್ರ ಮುತ್ತು ಬಂಗಾರದ ಸರಗಳಿಂದ ಅಲಂಕರಿಸಿ ಗೌರಿಯ ಸ್ಥಾಪನೆ ಮಾಡಬೇಕು. ಕಾಲಕ್ಕೆ ತಕ್ಕಂತೆ ಈಗ ಹಲವಾರು ಬದಲಾವಣೆಗಳಾಗಿವೆ. ಮಣ್ಣಿನ ಗಡಿಗೆಗಳು ಸಿಗುವುದು ವಿರಳ. ಸಮಯದ ಅಭಾವ, ತಾಳ್ಮೆ ಹಾಗೂ ಆಸಕ್ತಿಯ ಕೊರತೆ. ಹೀಗಾಗಿ ಮಾರ್ಪಾಡುಗಳು ಅನಿವಾರ್ಯ. ಇತ್ತೀಚೆಗೆ ತಾಮ್ರದ ಇಲ್ಲವೇ ಬೆಳ್ಳಿಯ ಕಲಶಗಳು ಮಣ್ಣಿನ ಗಡಿಗೆಯ ಸ್ಥಾನವನ್ನು ಅಲಂಕರಿಸಿವೆ.

    ಗೌರಿ ಪೂಜೆ

    ಗೌರಿಯ ಆವಾಹನೆ ಅನುರಾಧಾ ನಕ್ಷತ್ರದಲ್ಲಿ ಮತ್ತು ದೇವಿಗೆ ಷೋಡಶೋಪಚಾರದ ಪೂಜೆ ಪಂಚ ಭಕ್ಷ್ಯ ಪರಮಾನ್ನದ ನೈವೇದ್ಯ ಮರುದಿನ ಜ್ಯೇಷ್ಠಾ ನಕ್ಷತ್ರವಿರುವಾಗ ಮಾಡಿ ಮೂಲಾನಕ್ಷತ್ರದಲ್ಲಿ ವಿಸರ್ಜನೆ ಮಾಡಿ ಗೌರೀದಾರವನ್ನು ಧರಿಸಬೇಕು. ಗೌರಿ ಆವಾಹನೆಯ ದಿನ ಕಲಶ ಸ್ಥಾಪಿಸುವ ಮುನ್ನ ಅರಿಷಿಣ ಬೇರನ್ನು ತೇಯ್ದು ಅದರಲ್ಲಿ ಅದ್ದಿದ ದಾರಗಳನ್ನು ಅವರವರ ಮನೆಯ ಪದ್ಧತಿಗನುಸಾರವಾಗಿ (16+16 ಇಲ್ಲವೆ 16+16+8+7+5) ದಾರಗಳನ್ನು ಮಾಡಿಕೊಂಡು ಕಲಶದಲ್ಲಿ ಹಾಕಿರಬೇಕು. ಪೂಜೆಯನ್ನು ನೆರವೇರಿಸಿ, ವಿಸರ್ಜನೆಯ ನಂತರ ದಾರಗಳ ಎಳೆಗಳಿಗೆ ಅನುಸಾರವಾಗಿ ದೇವಿಗೆ ಸಮರ್ಪಿಸಿದ ಮಂಗಳದ್ರವ್ಯಗಳನ್ನು (ಅರಿಷಿಣ ಕುಂಕುಮ, ಗೆಜ್ಜೆ ವಸ್ತ್ರದ ಗೆಜ್ಜೆ, ಹೂವಿನ ದಳಗಳು, ಉತ್ತತ್ತಿ, ಕೊಬ್ಬರಿಯ ಚೂರುಗಳು (ನಿರ್ಮಾಲ್ಯ) ದಾರದಲ್ಲಿ ಗಂಟು ಹಾಕಿ ದಾರವನ್ನು ಕೊರಳಲ್ಲಿ ಧರಿಸುವುದು ಈ ವ್ರತದ ವಿಶೇಷ. ಅಂತೆಯೇ ಎಳೆಯಷ್ಟಮಿ. ಮುತ್ತೈದೆಯರಿಗೆ ಮಂಗಳದ್ರವ್ಯ ಫಲತಾಂಬೂಲಾದಿಗಳನ್ನು ಕೊಟ್ಟು ಸತ್ಕರಿಸಿದಲ್ಲಿ ಮುತ್ತೈದೆಭಾಗ್ಯ ಸ್ಥಿರವಾಗಿರುತ್ತದೆ. ನಂತರ ಹಿಂದಿನ ದಿನ ದೇವಿಗೆ ನಿವೇದಿಸಿದ ಕಡುಬು, ಚಕ್ಕಲಿ ಇತ್ಯಾದಿಗಳನ್ನು ತೆಗೆದಿರಿಸಿಕೊಂಡು ಸ್ವಲ್ಪವಾದರೂ ಸ್ವೀಕರಿಸಬೇಕೆಂಬ ಪರಿಪಾಠ ಪಾಲಿಸುವುದಿದೆ.

    ಇದನ್ನೂ ಓದಿ: VIDEO| ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್​ ಆದ ಖದೀಮರು; 8 ಮಂದಿ ಅಮಾನತು

    ಜ್ಯೇಷ್ಠಾದೇವಿಯ ವ್ರತ ಕಥೆ ಹಾಗೂ ಪೂಜಾಫಲ: ಭವಿಷ್ಯೋತ್ತರ ಪುರಾಣದನ್ವಯ ಕಥೆ ಇಂತಿದೆ. ಒಮ್ಮೆ ಶಿವನು ಪ್ರಸನ್ನವದನನಾಗಿ ಕುಳಿತ ಸಮಯದಲ್ಲಿ ಪಾರ್ವತಿ ದೇವಿ ‘‘ಸ್ವಾಮಿ ಸ್ತ್ರೀಯರಿಗೆ ಸಕಲ ಸೌಭಾಗ್ಯ, ಧನಧಾನ್ಯ ಐಶ್ವರ್ಯಾದಿಗಳನ್ನು ಕರುಣಿಸುವ ವ್ರತವೊಂದನ್ನು ಹೇಳಿ’’ ಎಂದು ಕೇಳಿಕೊಳ್ಳುತ್ತಾಳೆ. ಶಿವ ಮುಗುಳ್ನಕ್ಕು ಆಕೆಗೆ ಜ್ಯೇಷ್ಠಾದೇವಿಯ ವ್ರತವನ್ನು ಭಕ್ತಿ ಶ್ರದ್ಧೆಗಳಿಂದ ಆಚರಿಸಿದಲ್ಲಿ ಸುಖ ಸೌಭಾಗ್ಯಗಳನ್ನು ಹೊಂದುವಳೆಂದು ಹೇಳುತ್ತಾನೆ. ಭೂಲೋಕದ ಗಂಗಾತೀರದ ಋಷ್ಯಾಶ್ರಮಕ್ಕೆ ಹೋಗಿ ಅದರ ವಿಧಿ ವಿಧಾನಗಳನ್ನು ತಿಳಿದು ಬರಲು ಸಲಹೆ ನೀಡುತ್ತಾನೆ. ಪತಿಯ ಸಲಹೆಯಂತೆ ಪಾರ್ವತಿ ಋಷಿ ಸನ್ನಿಧಾನಕ್ಕೆ ಬಂದು ವ್ರತದ ಕುರಿತಾಗಿ ಕೇಳುತ್ತಾಳೆ.

    ಪ್ರಚಲಿತ ಕಥೆಯ ಸಾರಾಂಶ: ಜಯವರ್ಧನ ಎಂಬ ನಗರದಲ್ಲಿ ಸುಭದ್ರನೆಂಬ ವಿದ್ಯಾವಿನಯ ಸಂಪನ್ನ ಬ್ರಾಹ್ಮಣನೋರ್ವ ಸತಿಯೊಂದಿಗೆ ವಾಸಿಸುತ್ತಿದ್ದ. ಪತಿಗೆ ತಕ್ಕ ಸತಿ ಸುವೃತೆ. ಸಹಿಸಲಸಾಧ್ಯ ಬಡತನ. ಬೇಸತ್ತ ಸತಿ ಪತಿಯೊಂದಿಗೆ ‘‘ಈ ಬಡತನದ ಬವಣೆ ಸೈರಿಸಲಾಗುತ್ತಿಲ್ಲ ಬೇರೆಲ್ಲಿಗಾದರೂ ಹೋಗೋಣ’’ ಎನ್ನುತ್ತಾಳೆ. ಇಬ್ಬರೂ ಆ ಸ್ಥಳದಿಂದ ಹೊರಡುತ್ತಾರೆ. ಗೊತ್ತುಗುರಿಯಿಲ್ಲದೇ ಹೊರಟ ಅವರು ಮಾರ್ಗ ಮಧ್ಯದಲ್ಲಿ ತುಸು ವಿಶ್ರಮಿಸುತ್ತಾರೆ. ಪತಿ ಸ್ನಾನ ಸಂಧ್ಯಾವಂದನೆಗೆಂದು ತೆರಳಿದಾಗ, ಸುವೃತೆ ಸನಿಹದಲ್ಲಿಯೇ ಸುವಾಸಿನಿಯರ ಗುಂಪೊಂದನ್ನು ಕಾಣುತ್ತಾಳೆ. ಅವರೆಲ್ಲರೂ ಪೂಜೆ ಮಾಡುತ್ತಿರುವದನ್ನು ಕಂಡು ನಮಸ್ಕರಿಸಿ ‘‘ಇದಾವ ವ್ರತ? ನನಗೂ ತಿಳಿಸಿ’’ ಎಂದು ಕೇಳಿಕೊಳ್ಳುತ್ತಾಳೆ. ‘‘ಇದು ಮಂಗಳಪ್ರದ ಜ್ಯೇಷ್ಠಾದೇವಿಯ ವ್ರತ. ಇದನ್ನು ಆಚರಿಸಿದಲ್ಲಿ ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ’’ ಎಂದು ಉತ್ತರ ನೀಡುತ್ತಾರೆ.

    ಸುವೃತೆ ತನ್ನ ಪರಿಸ್ಥಿತಿಯನ್ನು ವ್ರತ ಮಾಡಿಸುತ್ತಿರುವ ವಶಿಷ್ಠ ಮುನಿಗಳಲ್ಲಿ ಅರುಹಿ ಅವರ ಆಶೀರ್ವಾದದೊಂದಿಗೆ ತಾನೂ ಶಕ್ತಯ ವ್ರತವನ್ನಾಚರಿಸುತ್ತಾಳೆ. ನಂತರ ದಂಪತಿ ಆಶ್ರಮಕ್ಕೆ ಬಂದಾಗ, ಆಶ್ರಮದ ಜಾಗದಲ್ಲಿ ಅರಮನೆಯಂತಹ ಮನೆಯನ್ನು ಕಂಡು ಆನಂದಾದಾಶ್ಚರ್ಯವಾಗುತ್ತದೆ. ಪತಿಗೆ ಇದು ತಾನು ಮಾಡಿದ ಜ್ಯೇಷ್ಠಾದೇವಿಯ ವ್ರತದ ಮಹಿಮೆಯೆಂದು ನಡೆದ ಸಂಗತಿ ತಿಳಿಸುತ್ತಾಳೆ. ಸತಿಪತಿ ಸಂತೋಷಭರಿತರಾಗಿ ಪ್ರತಿ ಭಾದ್ರಪದ ಶುಕ್ಲ ಅಷ್ಟಮಿ ವ್ರತಾಚರಣೆ ಮಾಡುತ್ತಾ ಸಕಲ ಸೌಭಾಗ್ಯಗಳೊಂದಿಗೆ ಸಂತಾನ ಭಾಗ್ಯವನ್ನೂ ಪಡೆದು ಉತ್ತಮ ಗತಿ ಪಡೆಯುತ್ತಾರೆ. ಮುನಿಗಳು ಪಾರ್ವತಿ ದೇವಿಗೆ ತಿಳಿಸಿದ ಈ ವ್ರತಾಚರಣೆಯಿಂದ ನಾವೂ ಜ್ಯೇಷ್ಠಾದೇವಿಯ ಕೃಪೆಗೆ ಪಾತ್ರರಾಗೋಣ.

    ಯಾವ ದಿನ, ಏನು?: ಇದೇ ಅಷ್ಟಮಿಯಂದು ಭಾನುವಾರವೂ ಸೇರಿದರೆ ನೀಲ ಜ್ಯೇಷ್ಠಾ ಎನ್ನುತ್ತಾರೆ. 2023ರ ಸೆ. 21 ಜ್ಯೇಷ್ಠಾದೇವಿಯ ಆವಾಹನೆ, ಸೆ. 22 ಗೌರಿಗೆ ಷೋಡಶೋಪಚಾರ ಪೂಜೆ, ಪಂಚಭಕ್ಷ್ಯ ಪರಮಾನ್ನದ ನೈವೇದ್ಯ, 23ರಂದುವಿಸರ್ಜನೆ ಹಾಗೂ ದೋರಬಂಧನ (ದಾರ ಕಟ್ಟಿಕೊಳ್ಳುವುದು) ಇದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts