Shehbaz Sharif : ಪಾಕಿಸ್ತಾನಕ್ಕೆ ನ್ಯಾಯಯುತವಾಗಿ ಸೇರಿರುವ ಸಿಂಧೂ ನೀರಿನ ಒಂದು ಹನಿಯನ್ನು ಭಾರತ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಜ್ಞೆ ಮಾಡಿದ್ದಾರೆ.
ಈ ಬಗ್ಗೆ ಇಸ್ಲಾಮಬಾದ್ನಲ್ಲಿ ಮಾತನಾಡಿರುವ ಪಾಕ್ ಪ್ರಧಾನಿ, ಭಾರತ ನೀರನ್ನು ನಿಲ್ಲಿಸಲು ಯಾವುದೇ ಹಸ್ತಕ್ಷೇಪ ಮಾಡಿದರೆ ಅದನ್ನು ಯುದ್ದಕ್ಕೆ ಸಮ ಎಂದು ಪರಿಗಣಿಸಲಾಗುವುದು. ನಮ್ಮ ನೀರನ್ನು ಹಿಡಿದಿಟ್ಟುಕೊಳ್ಳುವುದಾಗಿ ಭಾರತ ಬೆದರಿಕೆ ಹಾಕಿದರೆ, ಪಾಕಿಸ್ತಾನದ ಒಂದು ಹನಿ ನೀರನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ,ಭಾರತ ಇಂತಹ ಕೃತ್ಯಕ್ಕೆ ಪ್ರಯತ್ನಿಸಿದರೆ, ನಿಮಗೆ ಮತ್ತೆ ಪಾಠ ಕಲಿಸಲಾಗುವುದು, ಪಹಲ್ಗಾಮ್ನಲ್ಲಿ ಆದ ಪರಿಸ್ಥಿತಿ ಮತ್ತೆ ನಿರ್ಮಾಣವಾಗುತ್ತದೆ ಎಂದು ಪಾಕ್ ಪ್ರಧಾನಿ ಬೆದರಿಕೆ ಹಾಕಿದ್ದಾರೆ.
ಇದಕ್ಕೂ ಮೊದಲು, ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಸಿಂಧೂ ಜಲ ಒಪ್ಪಂದದ ಅಮಾನತು ಸಿಂಧೂ ಕಣಿವೆ ನಾಗರಿಕತೆಯ ಮೇಲಿನ ದಾಳಿ ಎಂದು ಬಣ್ಣಿಸಿದ್ದರು. ಭಾರತ ಮತ್ತೆ ಯುದ್ಧಕ್ಕೆ ಒತ್ತಾಯಿಸಿದರೆ ಪಾಕ್ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಅಮೆರಿಕದ ಫ್ಲೋರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ವಲಸಿಗರನ್ನುದ್ದೇಶಿಸಿ ಮಾತನಾಡಿದ ಅಸಿಮ್ ಮುನೀರ್, ಭಾರತವು ಸಿಂಧೂ ನದಿ ನೀರನ್ನು ಸ್ಥಗಿತಗೊಳಿಸುವ ನಿರ್ಧಾರವು 250 ಮಿಲಿಯನ್ ಜನರನ್ನು ಹಸಿವಿನಿಂದ ಬಳಲುವ ಅಪಾಯಕ್ಕೆ ಸಿಲುಕಿಸಬಹುದು ಎಂದು ಹೇಳಿದರು. ಪಾಕಿಸ್ತಾನಕ್ಕೆ ನೀರಿನ ಹರಿವನ್ನು ಕಡಿತಗೊಳಿಸಿದರೆ ಪಾಕ್ ಯಾವುದೇ ಅಣೆಕಟ್ಟನ್ನು ನಾಶಪಡಿಸುತ್ತದೆ ಎಂದು ತಿಳಿಸಿದ್ದರು.
ಭಾರತ ಅಣೆಕಟ್ಟು ಕಟ್ಟುವವರೆಗೆ ನಾವು ಕಾಯುತ್ತೇವೆ. ನಾವು ನಿರ್ಮಾಣ ಮಾಡಿದ ಅಣೆಕಟ್ಟನ್ನು ನಾಶಪಡಿಸುತ್ತೇವೆ ಎಂದು ಹೇಳಿದ್ದರು. ಸಿಂಧೂ ನದಿ ಭಾರತೀಯರ ಆಸ್ತಿಯಲ್ಲ ಎಂದಿದ್ದಾರೆ. (ಏಜೆನ್ಸೀಸ್)