ಹಾಸನ: ಚಿಕ್ಕ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಹೊರೆಯಾಗಲಿದೆ ಎಂದು ನಿಮ್ಹಾನ್ಸ್ ಅಭಿಪ್ರಾಯಪಟ್ಟಿದ್ದು, ಈ ಕುರಿತು ವರದಿ ಬಂದ ಕೂಡಲೇ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸಕಲೇಶಪುರ ತಾಲೂಕಿನ ದೇವಾಲದಕೆರೆ ಗ್ರಾಮದಲ್ಲಿ ಶನಿವಾರ ಮಾತನಾಡಿದ ಸಚಿವರು, ರಾಜ್ಯದಲ್ಲಿ ಕೆಲ ಖಾಸಗಿ ಶಾಲೆಗಳು ಆನ್ಲೈನ್ ಕ್ಲಾಸ್ ಗೀಳಿಗೆ ಬಿದ್ದಿವೆ. ಎಲ್ಕೆಜಿ ಮತ್ತು ಯುಕೆಜಿ ಮಕ್ಕಳಿಗೂ ಆನ್ಲೈನ್ನಲ್ಲೇ ಶಿಕ್ಷಣ ಕೊಡುವ ವಿಚಾರದ ನನಗೆ ಅಚ್ಚರಿಯಾಯ್ತು. ಇದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿರಿ VIDEO: ಸಚಿನ್ ತೆಂಡೂಲ್ಕರ್ ನೀಡಿದ್ದ ಚಾಲೆಂಜ್ ಸ್ವೀಕರಿಸಿದ ವಿಜಯಪುರ ಬಾಲಕ; ಕ್ರಿಕೆಟ್ ಪ್ರಿಯರು ಫುಲ್ ಫಿದಾ…
ಚಿಕ್ಕ ಮಕ್ಕಳ ಕಲಿಕೆಗೆ ಆನ್ಲೈನ್ ಶಿಕ್ಷಣ ಪೂರಕವೇ ಎಂದು ನಿಮ್ಹಾನ್ಸ್ಗೆ ಪತ್ರ ಬರೆದೆವು. ಆದರೆ, ಪುಟ್ಟ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಹೊರೆಯಾಗಲಿದೆ ಎಂಬ ಅಭಿಪ್ರಾಯ ನಿಮ್ಹಾನ್ಸ್ನಿಂದ ಬಂದಿದೆ. ಈ ಬಗ್ಗೆ ವರದಿ ಬಂದ ಬಳಿಕ ಆದೇಶ ಹೊರಡಿಸುತ್ತೇವೆ. ಸರ್ಕಾರದಿಂದ ಅಧಿಕೃತ ಆದೇಶ ಬರೋವರೆಗೆ ಯಾರೂ ಪ್ರವೇಶ ಪ್ರಕ್ರಿಯೆ ಆರಂಭಿಸಬಾರದು. ಇದನ್ನು ಉಲ್ಲಂಘಿಸುವ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ಎಚ್ಚರಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷಾರ್ಥಿಗಳಿಗೆ ಮಾಸ್ಕ್ ಕೊಡಲು ಸರ್ಕಾರವೇ ತೀರ್ಮಾನ ಮಾಡಿದೆ. ಆದರೆ, ರಾಜ್ಯದ ಎಲ್ಲ 8.5 ಲಕ್ಷ ವಿದ್ಯಾರ್ಥಿಗಳಿಗೂ ಮಾಸ್ಕ್ ಕೊಡಲು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮುಂದೆ ಬಂದಿದೆ. ಜತೆಗೆ ಸಂಘ-ಸಂಸ್ಥೆಗಳೂ ಮಾಸ್ಕ್ ವಿತರಿಸಲು ಮುಂದಾಗಿವೆ. ಹಾಗಾಗಿ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯ ಇಲ್ಲ. ಪರೀಕ್ಷಾ ಕೊಠಡಿಯಲ್ಲಿ ತಲಾ 18 ರಿಂದ 20 ವಿದ್ಯಾರ್ಥಿಗಳು ಕೂರಬೇಕು. ಯಾರಿಗಾದರೂ ಶೀತ, ಕೆಮ್ಮು, ಜ್ಚರ ಇದ್ದರೆ ಅಂತಹವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ವಿವರಿಸಿದರು.